Breaking
3 Apr 2026, Fri

ಯುವಕನ ಅಪಹರಣ ಪ್ರಕರಣ: ಏಳು ಆರೋಪಿಗಳ ಬಂಧನ, ಇಬ್ಬರು ಪರಾರಿ

ಉಡುಪಿ: ಯುವಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಸುರತ್ಕಲ್ ಕಾಟಿಪಳ್ಳದ ದೇವಿಪ್ರಸಾದ್ ಶೆಟ್ಟಿ (33), ಸುದೀಪ (22), ಮಿಥುನ್ ಕೈಕಂಬ (20), ಕೃಷ್ಣಾಪುರದ ಶ್ರೀಷಾ ಆನಂದ ಶೆಟ್ಟಿ (35), ಹಿರಿಯಡ್ಕ ಅಂಜಾರು ಗ್ರಾಮದ ಸುಜಿತ್ (27), ಕೆಮ್ಮಣ್ಣು ಗ್ರಾಮ ಪಡುಕುದ್ರುವಿನ ಸುಹಾಸ್ (31) ಹಾಗೂ ಕೆಮ್ಮಣ್ಣು ಹೂಡೆಯ ಮನೋಜ್ ವಿ. ಕೊಟ್ಯಾನ್ (34) ಎಂದು ಗುರುತಿಸಲಾಗಿದೆ.

ಪ್ರಮುಖ ಆರೋಪಿಗಳಾದ ಮಂಗಳೂರು ಜೋಕಟ್ಟೆಯ ಮನೋಜ ಕೋಡಿಕೆರೆ (42) ಮತ್ತು ಬಂಟ್ವಾಳ ತಾಲೂಕಿನ ಪಡು ರೊಟ್ಟಿಗುಡಿಯ ಚೇತನ್ ಕುಲಾಲ್ (38) ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

2025ರ ನವೆಂಬರ್ 25ರಂದು ಸಾಸ್ತಾನದಲ್ಲಿರುವ ಕೋಸ್ಟಲ್ ಪ್ಯಾರಡೈಸ್ ಹೋಟೆಲ್ ಎದುರು ರಸ್ತೆಯಲ್ಲಿ ಸಿದ್ಧಾಪುರ ಗ್ರಾಮದ ಮೋಹನದಾಸ್ ಶೆಟ್ಟಿ ಅವರ ಪುತ್ರ ತೇಜಸ್ ಅವರನ್ನು ಅಪಹರಿಸಲಾಗಿತ್ತು.

ಮನೋಜ ಕೋಡಿಕೆರೆ ಸೂಚನೆಯಂತೆ ಆತನ ಕಡೆಯ 2 ರಿಂದ 3 ಮಂದಿಯ ತಂಡ ನನ್ನನ್ನು ಕಿಡ್ನಾಪ್ ಮಾಡಿಕೊಂಡು ಹೋಗಿರುವ ವಿಚಾರವನ್ನು ತೇಜಸ್ ಫೋನ್‌ ಮೂಲಕ ತಿಳಿಸಿದ್ದ. ಈ ನಡುವೆ ಅಪರಿಚಿತ ವ್ಯಕ್ತಿ ಕರೆ ಮಾಡಿ, ತೇಜಸ್‌ನನ್ನು ಬಿಡ ಬೇಕಾದಲ್ಲಿ 50 ಲಕ್ಷ ರೂ. ಹಣ ನೀಡುವಂತೆ ಅಪಹರಣಕಾರರು ಹಣದ ಬೇಡಿಕೆ ಇಟ್ಟಿರುವುದು ಬೆಳಕಿಗೆ ಬಂದಿದೆ.

ಮೊದಲು 50 ಲಕ್ಷ ರೂ. ನೀಡುವಂತೆ ಬೆದರಿಕೆ ಹಾಕಿದ ಅಪಹರಣಕಾರರು, ಬಳಿಕ 3 ಕೋಟಿ ರೂ. ಹಣ ನೀಡದಿದ್ದರೆ ತೇಜಸ್ ಅವರನ್ನು ಕೊಲೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು ಎಂದು ದೂರಲಾಗಿದೆ.

ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Leave a Reply

Your email address will not be published. Required fields are marked *