ಸಿದ್ದಕಟ್ಟೆ: ಸಹಕಾರ ಸಂಘಗಳಲ್ಲಿನ ಸದಸ್ಯರ ಅನೂಕೂಲಕ್ಕಾಗಿ ಜಾರಿಗೊಂಡಿರುವ ಹಾಗೂ ಫಲಾನುಭವಿಗಳ ಕುಟುಂಬಕ್ಕೆ ವಾರ್ಷಿಕ ರೂ 5 ಲಕ್ಷ ವೈದ್ಯಕೀಯ ಚಿಕಿತ್ಸಾ ವೆಚ್ಚದ ನಗದು ರಹಿತ ಸೌಲಭ್ಯದೊಂದಿಗೆ ಚಾಲ್ತಿಯಲ್ಲಿರುವ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು 2024-25 ನೇ ಸಾಲಿಗೆ ಸಂಬಂಧಿಸಿದಂತೆ ಮರುಜಾರಿಗೊಳಿಸಲಾಗಿದ್ದು,ಈಗಾಗಲೇ ಈ ಯೋಜನೆ ಅನ್ವಯ ನೋಂದಾಯಿಸಿಕೊಂಡ ಸದಸ್ಯರು ನವೀಕರಣ ಮಾಡಬಹುದಾಗಿದೆ.
ಇಷ್ಟರವರೆಗೆ ನೋಂದಾಯಿಸಿಕೊಳ್ಳದ ಸಹಕಾರ ಸಂಘಗಳಲ್ಲಿನ ಸದಸ್ಯರಿಗೆ ಹೊಸದಾಗಿ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.ಈ ಯೋಜನೆ 2024-25 ನೇ ಸಾಲಿಗೆ ಸಂಬಂಧ ಪಟ್ಟಂತೆ ಚಿಕಿತ್ಸಾ ಅವಧಿಯನ್ನು ದಿನಾಂಕ 01-04-2025 ರಿಂದ 31-03-2026 ರ ವರೆಗೆ ನಿಗದಿ ಗೊಳಿಸಲಾಗಿದ್ದು ನೋಂದಣಿಯನ್ನು 2024 ಡಿಸೇಂಬರ್ 1 ರಿಂದ ಪ್ರಾರಂಭ ಗೊಂಡು ಡಿಸೇಂಬರ್ ತಿಂಗಳು ಅಂತ್ಯ ತನಕ ಮುಂದುವರಿಯಲಿದ್ದು ,ಯೋಜನೆಯಲ್ಲಿ ನೋಂದಾಯಿಸಿಕೊಳ್ಳಲು ಇಚ್ಚಿಸುವ ಸಹಕಾರ ಸಂಘಗಳಲ್ಲಿನ ಸದಸ್ಯರು ಆಧಾರ್ ಕಾರ್ಡ್ , ಪಡಿತರ ಚೀಟಿ ಜೆರಾಕ್ಸ್ ಪ್ರತಿ ಮತ್ತು ಭಾವಚಿತ್ರದೊಂದಿಗೆ ತಾವು ಸದಸ್ಯರು ಆಗಿರುವ ಸಂಘದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಸಂಬಂಧ ಪಟ್ಟ ರೈತ ಸದಸ್ಯರು ಯಾವುದಾದರೂ ಒಂದು ಸಹಕಾರಿ ಸಂಘಗಳಲ್ಲಿ ಸದಸ್ಯರಾಗಿ 3 ತಿಂಗಳು ಆಗಿದ್ದರೆ ಈ ಯೋಜನೆಗೆ ಅರ್ಹರಾಗುತ್ತಾರೆ.ಕುಟುಂಬದಲ್ಲಿ 4 ಸದಸ್ಯರು ಇರುವ ತನಕ ರೂ 500 ಪಾವತಿಸತಕ್ಕದ್ದು.ಪಡಿತರ ಚೀಟಿಯಲ್ಲಿ 4 ಸದಸ್ಯರ ನಂತರದ ಹೆಚ್ಚಿನ ಪ್ರತಿ ಸದಸ್ಯರಿಗೆ ತಲಾ ರೂ 100 ಪಾವತಿಸತಕ್ಕದ್ದು.ಪ.ಜಾತಿ ಮತ್ತು ಪರಿಶಿಷ್ಠ ಪಂಗಡದ ಸದಸ್ಯರು ಜಾತಿ ಪ್ರಮಾಣ ಪತ್ರದ ಪ್ರತಿ ಹಾಜರು ಪಡಿಸಿದ್ದಲ್ಲಿ ಉಚಿತವಾಗಿ ನೋಂದಾವಣೆ ಮತ್ತು ನವೀಕರಣ ಮಾಡಿಕೊಡಲಾಗುವುದು.ಆಸಕ್ತ ರೈತ ಸದಸ್ಯರು ಹಾಗೂ ಕುಟುಂಬದವರು ತಮ್ಮ ಕಾರ್ಯ ವ್ಯಾಪ್ತಿಯ ಸಮೀಪದ ಪ್ರಾಥಮಿಕ ಸಹಕಾರ ಸಂಘಗಳನ್ನು ಸಂಪರ್ಕಿಸಿ ಅಗತ್ಯ ದಾಖಾಲಾತಿಯೊಂದಿಗೆ ನೋಂದಾಯಿಸಿಕೊಂಡು ಯೋಜನೆಯ ಪ್ರಯೋಜನ ಪಡೆಯಬೇಕಾಗಿ ಸಿದ್ಧಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಪತ್ರಿಕಾ ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ.