ಹೊಕ್ಕಾಡಿಗೋಳಿ: ಚಂಡಮಾರುತದ ಕಾರಣ ಕಳೆದ ಕೆಲ ದಿನಗಳಿಂದ ರಾಜ್ಯದ್ಯಂತ ವಿಪರೀತ ಮಳೆಯಾಗುತ್ತಿದ್ದು ಜನ ಜೀವನ ಅಸ್ತವ್ಯಸ್ಥವಾಗಿದೆ. ಅಲ್ಲದೆ ಬೇರೆ ಬೇರೆ ಕಾರ್ಯಕ್ರಮಗಳಿಗೂ ಮಳೆ ಅಡ್ಡಿಯಾಗಿದ್ದು, ಕರಾವಳಿಗೆ ಹೊಡೆತ ನೀಡಿದೆ.
ಸದ್ಯ ಕರಾವಳಿಯಲ್ಲಿ ಕಂಬಳ ಸೀಸನ್ ಪ್ರಾರಂಭವಾಗಿದ್ದು ಇದೀಗ ಕಂಬಳಕ್ಕೆ ಮಳೆ ಅಡ್ಡಿಯಾಗಿದೆ, ಇದರ ಪರಿಣಾಮ ಡಿ. 7 ರಂದು ನಡೆಯಬೇಕಿದ್ದ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ವೀರ ವಿಕ್ರಮ ಜೋಡುಕರೆ ಕಂಬಳ ಮುಂದೂಡಲಾಗಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಹೊಕ್ಕಾಡಿಗೋಳಿ ಕಂಬಳ ಸಮಿತಿ ಅಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ “ಆತ್ಮೀಯ ಕಂಬಳಾಭಿಮಾನಿಗಳೇ, ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂದಿನ ಐದು ದಿನಗಳ ಕಾಲ ವಿಪರೀತ ಮಳೆಯಾಗುವ ಕಾರಣದಿಂದ ದಿನಾಂಕ 07.12.2024 ರ ಶನಿವಾರ ಜರಗಲಿರುವ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ವೀರ ವಿಕ್ರಮ ಜೋಡುಕರೆ ಕಂಬಳವನ್ನು ಮುಂದುಡಲಾಗಿದೆ. ಮುಂದಿನ ದಿನಾಂಕವನ್ನು ಅತೀ ಶೀಘ್ರದಲ್ಲಿ ಪ್ರಕಟಿಸಲಿದೆ.ಕಂಬಳ ಕೋಣದ ಯಜಮಾನರು,ತೀರ್ಪುಗಾರರು, ಮತ್ತು ಕಂಬಳಾಭಿಮಾನಿಗಳು ಸಹಕರಿಸುವಂತೆ ವಿನಂತಿ” ಎಂದು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.