ಬಂಟ್ವಾಳ, ಮಾರ್ಚ್ 23: ತಾಲೂಕಿನ ಜೋಡುಮಾರ್ಗದ ಬಿ.ಸಿ ರೋಡ್ ನಲ್ಲಿ ಇರುವ ಶ್ರೀ ರಕ್ತೇಶ್ವರಿ ದೇವೀ ಸನ್ನಿಧಿಯ ವರ್ಷಾವಧಿ ಉತ್ಸವವು ಏಪ್ರಿಲ್ 7ರಿಂದ 9ರವರೆಗೆ ಭಕ್ತಿಭಾವದಿಂದ ನಡೆಯಲಿದೆ.

ನೀಲೇಶ್ವರ ಬ್ರಹ್ಮಶ್ರೀ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ, ವೇದಮೂರ್ತಿ ಪಳನೀರು ಅನಂತ ಭಟ್ಟರ ಉಪಸ್ಥಿತಿಯಲ್ಲಿ ಉತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ಏಪ್ರಿಲ್ 7ರಂದು ವಿಶೇಷ ಪೂಜೆ, ರಂಗಪೂಜೆ, ಅಲಂಕಾರ ಪೂಜೆ ನಡೆಯಲಿದ್ದು, ಸಂಜೆ 6ರಿಂದ 8ರವರೆಗೆ ಭಜನಾ ಕಾರ್ಯಕ್ರಮ ನಡೆಯಲಿದೆ. ಏಪ್ರಿಲ್ 8ರಂದು ವಿಶೇಷ ಪೂಜೆಗಳೊಂದಿಗೆ, ಸಂಜೆ 6ರಿಂದ 8ರವರೆಗೆ ಚಿಣ್ಣರಿಂದ “ಶ್ರೀ ದೇವಿ ವೈಷ್ಣವಿ” ಯಕ್ಷಗಾನ ಬಯಲಾಟ ಏರ್ಪಡಿಸಲಾಗಿದೆ.

ಏಪ್ರಿಲ್ 9ರಂದು ಬೆಳಗ್ಗೆ 8ರಿಂದ ಗಣಹೋಮ, ಪ್ರದಾನ ಹೋಮ, ಕಲಶಾಭಿಷೇಕ ಹಾಗೂ ನಾಗಾರಾಧನೆ ನಡೆಯಲಿದ್ದು, ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಮತ್ತು ಅನ್ನಸಂತರ್ಪಣೆ ಜರುಗಲಿದೆ. ಸಂಜೆ 6ಕ್ಕೆ ವಿಶೇಷ ದುರ್ಗಾ ನಮಸ್ಕಾರ ಪೂಜೆ, ರಾತ್ರಿ 8ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಅದೇ ದಿನ ಸಂಜೆ 6ರಿಂದ 8ರವರೆಗೆ ಆರ್ಟ್ ಆಫ್ ಲಿವಿಂಗ್, ಬಂಟ್ವಾಳ ಶಾಖೆಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ಉತ್ಸವದ ಅಂಗವಾಗಿ ಶ್ರೀ ದೇವಿಗೆ ವಿಶೇಷ ಅಲಂಕಾರ ಪೂಜೆ ಹಾಗೂ ಹೂವಿನ ಪೂಜೆ ಸೇವೆಗಳು ಜರುಗಲಿವೆ. ನಾಗಪೂಜೆ, ನಾಗತಂಬಿಲ, ದುರ್ಗಾ ನಮಸ್ಕಾರ ಪೂಜೆ ಹಾಗೂ ಅಲಂಕಾರ ಪೂಜೆಗಳನ್ನು ಮಾಡಿಸಬೇಕಾದ ಭಕ್ತರು ಮುಂಚಿತವಾಗಿ ತಿಳಿಸುವಂತೆ ಸಮಿತಿ ವಿನಂತಿಸಿದೆ.

ಈ ಪುಣ್ಯಕರ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ, ದೇವರ ಗಂಧ-ಪ್ರಸಾದ ಸ್ವೀಕರಿಸಿ ಪುನೀತರಾಗುವಂತೆ ಬಿ.ಸಿ ರೋಡ್ ಶ್ರೀ ರಕ್ತೇಶ್ವರಿ ದೇವೀ ಸನ್ನಿಧಿ ಸಮಿತಿ ಮನವಿ ಮಾಡಿದೆ.



