ಬಂಟ್ವಾಳ: ಬ್ರಿಟಿಷರು ಬಿಟ್ಟು ಹೋದ ದಾಸ್ಯ ಮನೋಭಾವದಿಂದ ಭಾರತೀಯರು ಸಾಮಾಜಿಕವಾಗಿ ರಾಜಕೀಯವಾಗಿ ಹೊರಗೆ ಬಂದಿಲ್ಲ. ದೇಶದಲ್ಲಿ ಏಕತಾ ಭಾವ ಬೆಳೆಸಿಕೊಂಡು ನಮ್ಮತನ ಉಳಿಸಿ ಎಲ್ಲೆಡೆಯೂ ಪ್ರತಿಬಿಂಬಿಸಬೇಕು ಎಂದು ಟಿವಿ 9 ಕನ್ನಡ ವಾಹಿನಿಯ ನಿರೂಪಕ ಸಂಪಾದಕ ರಂಗನಾಥ್ ಭಾರದ್ವಾಜ್ ಹೇಳಿದರು.

ಅವರು ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಮಾ. 20 ರಂದು ಏರ್ಪಡಿಸಲಾದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಶ್ರೀರಾಮನ ಮೂರ್ತಿಗೆ ಹಾಲಭಿಷೇಕ ಮಾಡಿ ಉದ್ಘಾಟಿಸಿ ಮಾತನಾಡಿದರು.

ಹಿಂದುಗಳು ಧರ್ಮ ಸಂಸ್ಕೃತಿಗಳ ಬಗ್ಗೆ ಮಾತನಾಡಲು ಹಿಂದು ಮುಂದು ನೋಡಬೇಕಾಗಿದೆ. ರಾಷ್ಟ್ರೀಯ ವಿಚಾರಗಳನ್ನು ಸಾಬೀತು ಪಡಿಸಲು ಕೋರ್ಟಿಗೆ ಹೋಗಬೇಕಾಗಿರುವುದು ನಮ್ಮ ದೇಶದ ದುರಂತಕ್ಕೆ ಉದಾಹರಣೆಯಾಗಿದೆ ಎಂದ ಅವರು ಇಂದಿನ ವಿದ್ಯಾರ್ಥಿಗಳಲ್ಲಿ ಭಾರತೀಯತೆ ಮತ್ತು ಸ್ವದೇಶಿ ಮಂತ್ರ ಬಿತ್ತಿದರೆ ಮಾತ್ರ ವಸಾಹತು ಮನೋಭಾವದಿಂದ ಮುಕ್ತವಾಗಲು ಸಾಧ್ಯ ಎಂದು ಹೇಳಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ವಸಾಹತುಶಾಹಿ ವಿದೇಶಿ ಆಳ್ವಿಕೆಯಲ್ಲಿ ದೇಶದ ರಾಜಕೀಯ ಮತ್ತುಆರ್ಥಿಕ ವ್ಯವಸ್ಥೆಯಲ್ಲಷ್ಟೇ ಅಲ್ಲ ಜನರ ಮನೋಭಾವ, ಚಿಂತನೆ, ಸಂಸ್ಕೃತಿಯ ಮೇಲೂ ಪ್ರಭಾವ ಬೀರಿ ನಮ್ಮತನವನ್ನು ಮರೆಯುವಂತೆ ಮಾಡಿದೆ ಎಂದರು.

ವಿಚಾರ ಸಂಕಿರಣದ ಮೊದಲ ಗೋಷ್ಠಿಯಲ್ಲಿ ಡಾ.ಆರತಿ ವಿ.ಬಿ.ಯವರು ಭಾಷೆ, ಧರ್ಮ, ಸಂಸ್ಕೃತಿ ಮತ್ತು ಆಚರಣೆಗಳ ಮೇಲೆ ಇಣುಕು ನೋಟ ಬೀರಿದರು.
ಎರಡನೇ ಅವಧಿಯಲ್ಲಿ ಆಡಳಿತ ಮತ್ತು ನ್ಯಾಯಾಂಗ ವ್ಯವಸ್ಥೆ ವಸಾಹತು ಮನೋಭಾವದಿಂದ ಮುಕ್ತವಾಗುವ ಅವಶ್ಯಕತೆಯ ಬಗ್ಗೆ ಕುಡುಚಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಪಿ.ರಾಜೀವ ಕುಡಚಿ ವಿಚಾರ ಮಂಡಿಸಿದರು.
ಮೂರನೇ ಅವಧಿಯಲ್ಲಿ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಮಾಜಿ ಅಧ್ಯಕ್ಷ ಚಿಂತಕ ರೋಹಿತ್ ಚಕ್ರತೀರ್ಥರು ಶಿಕ್ಷಣ, ಇತಿಹಾಸದ ಮೇಲೆ ಚರ್ಚಿಸಿದರು.
ನಾಲ್ಕನೇ ಅವಧಿಯಲ್ಲಿ ಪ್ರಜ್ಞಾಪ್ರವಾಹದ ಅಖಿಲ ಭಾರತೀಯ ಟೋಳಿ ಸದಸ್ಯ ರಘನಂದನ್ ಮುಕ್ತ ಚಿಂತನೆ ನಡೆಸಿ ಸಮಾರೋಪ ಭಾಷಣ ಮಾಡಿದರು.

ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ ವಹಿಸಿದ್ದರು. ವೇದಿಕೆಯಲ್ಲಿ ಸಂಚಾಲಕ ವಸಂತ ಮಾಧವ ಉಪಸ್ಥಿತರಿದ್ದರು.

ಅಕ್ಷತಾ ಕಾವೂರು, ರೂಪಲೇಖಾ ಪಾಣಾಜೆ, ಸತೀಶ ಶಿವಗಿರಿ ಗೋಷ್ಠಿಗಳ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಕಾರ್ಯನಿರ್ಹಣಾಧಿಕಾರಿ ಪ್ರಾಂಶುಪಾಲ ಕೃಷ್ಣ ಪ್ರಸಾದ ಸ್ವಾಗತಿಸಿದರು. ವಿದ್ಯಾರ್ಥಿಗಳು ನಿರೂಪಿಸಿ, ದೇಶ ಭಕ್ತಿ ಗೀತೆಗಳನ್ನು ಹಾಡಿದರು. ಯತಿರಾಜ ಪೆರಾಜೆ ವಂದಿಸಿದರು. ಆರಂಭದಲ್ಲಿ ಅತಿಥಿಗಳು ಶಿಶುಮಂದಿರ, ಪ್ರಾಥಮಿಕ ಶಾಲೆಯ ಮಕ್ಕಳ ಚಟುವಟಿಕೆಗಳನ್ನು ವೀಕ್ಷಿಸಿ, ಸರಸ್ವತಿ ವಂದನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. 60ಕ್ಕೂ ಹೆಚ್ಚು ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.



