ಮಂಗಳೂರು: ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಕಾವೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮರಕಡ ಕುಂಜತ್ತಬೈಲು ನಿವಾಸಿ ಪ್ರತೀಕ್ (32) ಮತ್ತು ಯೆಯ್ಯಾಡಿ ದಂಡಕೇರಿ ನಿವಾಸಿ ವೀಕ್ಷಿತ್ (21) ಎಂದು ಗುರುತಿಸಲಾಗಿದೆ.

ನಗರದ ಹೊರವಲಯದ ಪಡುಶೆಡ್ಡೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಕಾರು ನಿಲ್ಲಿಸಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಇಬ್ಬರನ್ನು ಪೊಲೀಸರು ವಿಚಾರಣೆ ನಡೆಸಿದರು. ಈ ವೇಳೆ ಅವರು ಎಂಡಿಎಂಎ ಮಾರಾಟಕ್ಕೆ ಯತ್ನಿಸಿದ್ದು ಗ್ರಾಹಕರಿಗಾಗಿ ಕಾಯುತ್ತಿರುವುದಾಗಿ ವಿಚಾರಣೆಯ ವೇಳೆ ತಿಳಿದುಬಂದಿದೆ.

ಬಂಧಿತ ಆರೋಪಿಗಳಿಂದ 30 ಸಾವಿರ ರೂ. ಮೌಲ್ಯದ 2.29 ಗ್ರಾಂ ತೂಕದ ಎಂಡಿಎಂಎ ಮತ್ತು 40 ಸಾವಿರ ರೂ. ಮೌಲ್ಯದ 4.03 ಗ್ರಾಂ ತೂಕದ ಎಂಡಿಎಂಎ , 2 ಮೊಬೈಲ್ ಫೋನ್, ಕಾರು, ಡಿಜಿಟಲ್ ತೂಕ ಮಾಪನ ಯಂತ್ರ ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











