Breaking
17 Mar 2026, Tue

ಕುದುರೆಮುಖದಲ್ಲಿ ಕತ್ತಲ ಲೋಕದ ಬದುಕಿಗೆ ಬೆಳಕು: ಆದಿವಾಸಿ ಕುಟುಂಬಗಳಿಗೆ ವಿದ್ಯುತ್ ಪೂರೈಕೆ ಶೀಘ್ರ

ಕುದುರೆಮುಖ: ಶತಮಾನಗಳಿಂದ ಕತ್ತಲೆಯಲ್ಲಿ ದಿನದೂಡುತ್ತಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಆದಿವಾಸಿ ಕುಟುಂಬಗಳು ಸೇರಿದಂತೆ ಅರಣ್ಯವಾಸಿಗಳಿಗೆ ಕೊನೆಗೂ ಬೆಳಕು ನೀಡುವ ಪ್ರಕ್ರಿಯೆಯು ಇಲಾಖಾ ಮಟ್ಟದಲ್ಲಿ ತ್ವರಿತವಾಗಿ ನಡೆಯುತ್ತಿದ್ದು , ಕತ್ತಲು ಮುಕ್ತವಾಗಿ ಬೆಳಕಿನೆಡೆಗೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಸಾಗಲಿದೆ.

ಸುಮಾರು ಎರಡು ಶತಮಾನಗಳಿಂದಲೂ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಾಸಿಗಳು ವಿದ್ಯುತ್ ಬೆಳಕು ಕಾಣದೆ ಕತ್ತಲೆಯಲ್ಲಿರುವ ಬಗ್ಗೆ ಮಾಧ್ಯಮಗಳ ನಿರಂತರವಾಗಿ ವರದಿ , ಸಂಘಟನೆಗಳ ನಿರಂತರ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ಆದಿವಾಸಿ ಸಮುದಾಯಕ್ಕೆ ಸಂವಿಧಾನಬದ್ಧ ಮೂಲಭೂತ ಸೌಕರ್ಯಗಳನ್ನು ಒದಗಿಸಲು ವಿಶೇಷ ಮುತುವರ್ಜಿ ವಹಿಸಿದ್ದು , ಇದೀಗ ವಿದ್ಯುತ್ ಪೂರೈಕೆಗಾಗಿ ರೂಪುರೇಷೆ ಸಿದ್ದಗೊಂಡಿದೆ. 2024 ರ ಡಿಸೆಂಬರ್ ತಿಂಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಖುದ್ದಾಗಿ ಆದಿವಾಸಿ ಮುಖಂಡರು , ಅಧಿಕಾರಿಗಳ ಜೊತೆಗೆ ಸಭೆ ನಡೆಸಿದರು. ಆ ಬಳಿಕ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಿಶೇಷ ಸಭೆ ನಡೆದ ಬಳಿಕ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತಗೊಂಡಿತು.

ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾರಾವಿ , ಕುತ್ಲೂರು , ನಾವರ , ಸುಲ್ಕೇರಿಮೊಗ್ರು , ಶಿರ್ಲಾಲು , ಸವಣಾಲು , ನಡ , ನಾವೂರು , ಮಲವಂತಿಗೆ ಹೀಗೆ 9 ಗ್ರಾಮಗಳು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಗೆ ಒಳಪಡುತ್ತದೆ. ಇದರಲ್ಲಿ ನಡ , ಶಿರ್ಲಾಲು ಗ್ರಾಮಗಳಲ್ಲಿ ಪೂರ್ಣ ಪ್ರಮಾಣದ ವಿದ್ಯುತ್ ಸಂಪರ್ಕಗೊಂಡಿದ್ದು , ಸುಲ್ಕೇರಿಮೊಗ್ರು ಗ್ರಾಮದಲ್ಲಿ ಮೊದಲನೇ ಹಂತದ ವಿದ್ಯುತ್ ಸಂಪರ್ಕ ಕಾಮಗಾರಿ ಪೂರ್ಣಗೊಂಡು , ಇದೀಗ ಎರಡನೇ ಹಂತದ ವಿದ್ಯುತ್ ಕಾಮಗಾರಿ ನಡೆಯುತ್ತಿದೆ. ಒಂದೆರಡು ವಾರಗಳಲ್ಲಿ ಕಾಮಗಾರಿ ಮುಕ್ತಾಯಗೊಂಡು , ವಿದ್ಯುತ್ ಸಂಪರ್ಕ ನೀಡಬಹುದು. ಇನ್ನುಳಿದಂತೆ 6 ಗ್ರಾಮಗಳು ವಿದ್ಯುತ್ ಕಾಣದ ಕತ್ತಲ ಲೋಕದಲ್ಲಿದೆ.

ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ಬೆಳ್ತಂಗಡಿ ತಾಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ 6 ಗ್ರಾಮಗಳಲ್ಲಿ ಅರಣ್ಯ , ಕಂದಾಯ , ಮೆಸ್ಕಾಂ ಇಲಾಖೆಗಳು ಜಂಟಿ ಸರ್ವೆ ಕಾರ್ಯ ನಡೆಸಿ , ಹಲವಾರು ಪ್ರಮುಖ ದಾಖಲೆಗಳನ್ನು ಸಂಗ್ರಹಿಸಿ , ನಂತರ ಖಾಸಗಿ ಏಜೆನ್ಸಿ ಮೂಲಕ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲಾಗಿದೆ. ಇದೀಗ ಅರ್ಜಿಗೆ ಸಂಬಂಧಿಸಿದಂತೆ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಅನುಮತಿಗಾಗಿ ರಾಷ್ಟ್ರೀಯ ಪರಿಸರ ಮಂಡಳಿಗೆ ರವಾನೆಯಾಗಿದ್ದು , ಅನುಮತಿ ಬಳಿಕ ಅರಣ್ಯ ಹಕ್ಕು ಕಾಯ್ದೆಯಡಿ ಆನ್‌ಲೈನ್ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕಾಗಿದೆ. ಏಕಕಾಲದಲ್ಲಿ ಎಲ್ಲಾ ಗ್ರಾಮಗಳ ಅರ್ಜಿಗಳು ಸಲ್ಲಿಕೆಯಾಗಿರುವುದರಿಂದ ಮತ್ತು ರಾಜ್ಯ ಸರ್ಕಾರದ ವಿಶೇಷ ಮುತುವರ್ಜಿಯಿಂದ ತ್ವರಿತವಾಗಿ ಅನುಮತಿ ಸಿಗಬಹುದು ಎಂಬುದು ಅರಣ್ಯ ಇಲಾಖೆಯ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಶತಮಾನಗಳಿಂದ ಸಂವಿಧಾನಬದ್ಧ ವಿದ್ಯುತ್ , ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳಿಂದ ವಂಚಿತರಾದ ಈ ಮಣ್ಣಿನ ಮೂಲನಿವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ರಾಜ್ಯ ಸರ್ಕಾರ ವಿಶೇಷ ಮುತುವರ್ಜಿ ವಹಿಸುತ್ತಿದೆ. ಹತ್ತಾರು ವರ್ಷಗಳಿಂದ ನಡೆಯುತ್ತಿದ್ದ ನಮ್ಮ ಹೋರಾಟ ಇಂದು ಫಲ ಕೊಡುತ್ತಿರುವುದು ಸಂತಸ ತಂದಿದೆ. ಆದಷ್ಟು ಬೇಗ ಮೂಲನಿವಾಸಿಗಳ ಕತ್ತಲ ಲೋಕದ ಬದುಕಿಗೆ ಬೆಳಕು ಹರಿಸುವ ಕೆಲಸವಾಗಲಿ ಎಂದು ಬೆಳ್ತಂಗಡಿಯ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲ ಹೇಳಿದ್ದಾರೆ.

Leave a Reply

Your email address will not be published. Required fields are marked *