ಮಂಗಳೂರು: ಕನ್ನಡ ಭವನ ಮತ್ತು ಗ್ರಂಥಾಲಯದ ನೇತೃತ್ವದಲ್ಲಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್‌ನ ವಾರ್ಷಿಕೋತ್ಸವದ ಅಂಗವಾಗಿ ಕನ್ನಡ ಭವನದಲ್ಲಿ ಕಾಸರಗೋಡು-ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನವು ನಡೆಯಿತು.

ಈ ವೇಳೆ ಆಶೀರ್ವಚನ ನೀಡಿ ಮಾತನಾಡಿದ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ಪುರಾತನ ಭಾಷೆಗಳಲ್ಲೊಂದಾದ ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರಿಗಿದೆ. ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿಗೆ ಗದಾಪ್ರಹಾರ ಬೀಳುತ್ತಿದ್ದರೂ ಅವುಗಳನ್ನೆಲ್ಲ ಮೆಟ್ಟಿ ನಿಂತು ಕನ್ನಡ ಭಾಷೆ, ಸಂಸ್ಕೃತಿ ಉಳಿಸಲು ವಿವಿಧ ಯೋಜನೆಗಳನ್ನು ಕಾರ್ಯಗತಗೊಳಿಸುವ ಕನ್ನಡ ಭವನದ ಕನ್ನಡ ಕಾಯಕ ಅಭಿನಂದನಾರ್ಹ ಎಂದು ಹೇಳಿದರು.

ಲಕ್ಷೇಶ್ವರ ಗೋನಾಳದ ಶ್ರೀ ರಮೇಶ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಕನ್ನಡ ಭವನ ನಿರ್ದೇಶಕ ಡಾ| ಕೆ.ಎನ್. ವೆಂಕಟ್ರಮಣ ಹೊಳ್ಳ ದೀಪ ಪ್ರಜ್ವಲನೆಗೈದರು. ಕನ್ನಡ ಚು.ಸಾ.ಪ.ದ.ಕ. ಜಿಲ್ಲಾ ಘಟಕ ಅಧ್ಯಕ್ಷ ಡಾ| ಕೊಳ್ಚಪ್ಪೆ ಗೋವಿಂದ ಭಟ್ ಉದ್ಘಾಟಿಸಿದರು.
ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ನಾಡೋಜ ಡಾ| ಕೃಷ್ಣಪ್ರಸಾದ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ದ.ಕ. ಜಿಲ್ಲೆಯ ನಿಕಟಪೂರ್ವ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕನ್ನಡ ಕಟ್ಟಾಳು ನಂ. ವಿಜಿ ಕುಮಾರ್, ಸಾಹಿತಿ ಡಾ| ಸುರೇಶ್ ನೆಗಳಗುಳಿ, ಚು.ಸಾ.ಪ.ದ.ಕ. ಜಿಲ್ಲೆ ಗೌರವಾಧ್ಯಕ್ಷ ಇರಾನೇಮು ಪೂಜಾರಿ, ಕನ್ನಡ ಭವನ ಗದಗ ಜಿಲ್ಲಾಧ್ಯಕ್ಷ ಡಾ| ಸಂ..ವೆ. ತಮ್ಮನ ಗೌಡ್ರ, ಜಯಾನಂದ ಪೆರಾಜೆ, ಡಾ| ಶಾಂತಾ ಪುತ್ತೂರು, ದ.ಕ. ಜಿಲ್ಲಾ ಕನ್ನಡ ಚು.ಸಾ.ಪ. ಗೌರವಾಧ್ಯಕ್ಷೆ ಸತ್ಯವತಿ ಭಟ್ ಕೊಳಚಪ್ಪು, ಕೊಡಗು ಜಿಲ್ಲಾ ಚು.ಸಾ.ಪ. ಅಧ್ಯಕ್ಷೆ ರುಬೀನಾ ಎಂ.ಎ, ಪಿ.ವಿ. ಪ್ರದೀಪ್ ಕುಮಾರ್, ರೇಖಾ ಸುಧೇಶ್ ರಾವ್, ಸಂಘಟನಾ ಕಾರ್ಯದರ್ಶಿ ಶಾರದಾ ಮೊಳೆಯಾರ್ ಮೊದಲಾದವರು ಉಪಸ್ಥಿತರಿದ್ದರು.

ಕನ್ನಡ ಭವನ ಸಂಸ್ಥಾಪಕ ಡಾ| ವಾಮನ್ ರಾವ್ ಬೇಕಲ್ ಪ್ರಸ್ತಾವಿಸಿ, ಕಾಸರಗೋಡು ಜಿಲ್ಲಾ ಚು.ಸಾ.ಪ. ಅಧ್ಯಕ್ಷ ವಿರಾಜ್ ಅಡೂರು ಕಾರ್ಯಕ್ರಮ ನಿರೂಪಿಸಿದರು, ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿದರು.
ಸಮ್ಮೇಳನ ಆರಂಭಕ್ಕೆ ಮುನ್ನ ಶ್ರೀ ಲಕ್ಷ್ಮಣ ಲಕ್ಷ್ಮಣಾನಂದ ಸರಸ್ವತೀ ಮಹಿಳಾ ಭಜನಾ ವೃಂದ ಅಣಂಗೂರು ಇವರಿಂದ ಭಜನೆ ಸಂಕೀರ್ತನೆ ನಡೆಯಿತು.

ನಗರದ ಶ್ರೀ ಧೂಮಾವತಿ ದೈವಸ್ಥಾನ ಪರಿಸರದಿಂದ ಸಮ್ಮೇಳನ ಸರ್ವಾಧ್ಯಕ್ಷರಾರ ಡಾ| ಕೃಷ್ಣಪ್ರಸಾದ್ ಅವರಿಗೆ ಸಮ್ಮೇಳನಾಧ್ಯಕ್ಷ ಡಾ| ಕೆ.ಎನ್. ವೆಂಕಟ್ರಮಣ ಹೊಳ್ಳ ಹಾರಾರ್ಪಣೆ ಗೈದು “ಕನ್ನಡ ಮೆರವಣಿಗೆ”ಗೆ ನೇತೃತ್ವ ನೀಡಿದರು. ಕ.ಸಾ.ಪ. ಕೇರಳ ಗಡಿನಾಡ ಘಟಕಾಧ್ಯಕ್ಷರಾದ ಡಾ| ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ ಮರವಣಿಗೆ ಉದ್ಘಾಟಿಸಿ ಮಾತನಾಡಿದರು.
ಸಮ್ಮೇಳನದಲ್ಲಿ ಸ್ವಾಮೀಜಿ ದ್ವಯರಿಗೆ ಶಾಲು, ಫಲಪುಷ್ಪ, ಸ್ಮರಣಿಕೆ, ಫಲಕಗಳಿಂದ ಗೌರವಾರ್ಪಣೆ ಮಾಡಲಾಯಿತು. 2 ಪುಸ್ತಕ ಬಿಡುಗಡೆ, 20 ಕವಿಗಳಿಗೆ ಕವಿ ಕಾವ್ಯ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶ್ರೀ ಗುರುರಾಜ್ ಕಾಸರಗೋಡು ಸಾರಥ್ಯದ ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ(ರಿ) ತಂಡದಿಂದ ನೃತ್ಯ ವೈಭವ ನಡೆಯಿತು.
ಶ್ರೀ ವಿರಾಜ ಅಡೂರು ಇವರ ಅಧ್ಯಕ್ಷತೆಯಲ್ಲಿ ಸುಮಾರು 50 ಮಂದಿ ಕವಿಗಳಿಂದ ಅಂತಾರಾಜ್ಯ ಕವಿಗೋಷ್ಠಿ ನಡೆಯಿತು.

ಗಡಿನಾಡ ಚೇತನ ಪ್ರಶಸ್ತಿ ಪುರಸೃತರಾದ ಹಿರಿಯ ಸಾಹಿತಿ ಶ್ರೀ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಬಿ.ಜೆ.ಪಿ. ಕ್ಯಾಲಿಕೆಟ್ ರೀಜನ್ ಅಧ್ಯಕ್ಷರಾದ ಅಡ್ವ.ಜೆ ಕೆ.ಶ್ರೀಕಾಂತ್ ಮುಖ್ಯ ಅಥಿತಿಯಾಗಿ ಭಾಗವಹಿಸಿ ಕನ್ನಡದ ಅಸ್ತಿತ್ವಕ್ಕಾಗಿ ಹೋರಾಡಿದನ್ನು ನೆನಪಿಸಿಕೊಂಡರು. 20 ಮಂದಿ ಕವಿಗಳಿಗೆ ಚುಟುಕು ಸಿರಿ ರತ್ನ ಪ್ರಶಸ್ತಿಯನ್ನು ನೀಡಲಾಯಿತು.




