Breaking
27 Apr 2026, Mon

ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ₹41.85 ಲಕ್ಷ ವಂಚನೆ: ಪ್ರಕರಣ ದಾಖಲು

ಮಂಗಳೂರು: ಅಪರಿಚಿತ ವ್ಯಕ್ತಿಯೋರ್ವ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಂದ 41.85 ಲಕ್ಷ ರೂ. ವಂಚಿಸಿರುವ ಘಟನೆ ನಡೆದಿದೆ.

ಜನವರಿ 31ರಂದು ಅಪರಿಚಿತ ವ್ಯಕ್ತಿಯೋರ್ವನು ತನ್ನನ್ನು ಮುಂಬೈ ಸಿಸಿಬಿ ಪೊಲೀಸ್ ಅಧಿಕಾರಿಯೆಂದು ಪರಿಚಯಿಸಿಕೊಂಡು ಸಂಪರ್ಕಿಸಿದ್ದಾನೆ. ದೂರುದಾರರ ಗುರುತಿನ ಚೀಟಿಯನ್ನು ಬಳಸಿ ಮುಂಬೈಯಲ್ಲಿ ಕೆನರಾ ಬ್ಯಾಂಕ್‌ನಲ್ಲಿ ಖಾತೆ ತೆರೆಯಲಾಗಿದ್ದು, ಅದರಲ್ಲಿ ಅವ್ಯವಹಾರ ನಡೆದಿದೆ ಎಂದು ಹೇಳಿದ್ದಾನೆ.

ಗುರುತಿನ ಚೀಟಿ ಸಂಖ್ಯೆಯನ್ನು ದುರುಪಯೋಗಪಡಿಸಿಕೊಂಡು ಮೊಬೈಲ್ ಸಂಖ್ಯೆಯನ್ನೂ ಪಡೆದಿದ್ದಾರೆ ಎಂದು ತಿಳಿಸಿದ್ದಾನೆ.
ಕೆನರಾ ಬ್ಯಾಂಕ್ ಖಾತೆ ಮೂಲಕ ಅಕ್ರಮ ಹಣ ವರ್ಗಾವಣೆ ನಡೆದಿರುವುದರಿಂದ ನಿಮ್ಮ ವಿರುದ್ಧ ಸುಪ್ರೀಂ ಕೋರ್ಟ್ ವಾರಂಟ್ ಇದೆ, ಬಂಧಿಸಲಾಗುವುದು ಎಂದು ಬೆದರಿಕೆ ಹಾಕಿ ವಾಟ್ಸ್‌ಆಪ್ ವಿಡಿಯೋ ಕಾಲ್ ಮೂಲಕ ತನಿಖೆಗೆ ಸಹಕರಿಸಬೇಕು ಎಂದು ಹೇಳಲಾಗಿದೆ.

ಬಂಧನದಿಂದ ಪಾರಾಗಬೇಕಾದರೆ ಬ್ಯಾಂಕ್ ಖಾತೆಗಳ ಪರಿಶೀಲನೆ ಮಾಡಬೇಕು. ಖಾತೆಯಲ್ಲಿರುವ ಹಣವನ್ನು ಪರಿಶೀಲನೆ ಪೂರ್ಣಗೊಳ್ಳುವವರೆಗೆ ಸೂಚಿಸಿದ ಖಾತೆಗಳಿಗೆ ವರ್ಗಾಯಿಸಬೇಕು ಎಂದು ಆರೋಪಿಯು ತಿಳಿಸಿದ್ದಾನೆ. ಅದರಂತೆ ದೂರುದಾರರು ಫೆ. 9ರಿಂದ ಫೆಬ್ರವರಿ 18ರವರೆಗೆ ಆರೋಪಿಯು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು ₹41.85 ಲಕ್ಷವನ್ನು ವರ್ಗಾಯಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *