ಸಿದ್ದಕಟ್ಟೆ: ರೈತರ ಸಾಲ ಮನ್ನಾ ಬಾಕಿ ಮೊತ್ತ ಬಿಡುಗಡೆ ಗೊಳಿಸುವಂತೆ ಕೋರಿ ಸಿದ್ದಕಟ್ಟೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಸಹಕಾರ ಸಚಿವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಕರ್ನಾಟಕ ಸರಕಾರವು 2018-19 ನೇ ಸಾಲಿನಲ್ಲಿ ರೈತರು ಪಡೆದಿರುವ ಬೆಳೆ ಸಾಲಗಳ ಪೈಕಿ ಒಂದು ಲಕ್ಷವನ್ನು ಮನ್ನಾ ಮಾಡಿ ಆದೇಶ ಹೊರಡಿಸಲಾಗಿತ್ತು .ಈ ಆದೇಶದಲ್ಲಿನ ನಿಯಾಮವಳಿಯಂತೆ ಸಹಕಾರ ಸಂಘಗಳಲ್ಲಿ ಶೂನ್ಯ ಬಡ್ಡಿದರದಲ್ಲಿ ಬೆಳೆಸಾಲ ಪಡೆದಿರುವ ರೈತರ ಅರ್ಜಿಗಳನ್ನು ಪರಿಶೀಲಿಸಿ ಸಾಲ ಮನ್ನಾ ಯೋಜನೆಗೆ ಅರ್ಹರಾದ ಪೈಕಿ ಬಹುತೇಕ ರೈತರಿಗೆ ಸಾಲಮನ್ನಾ ಹಣವನ್ನು ಸರಕಾರ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಿರುತ್ತದೆ . ಈ ರೀತಿಯಲ್ಲಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳಲ್ಲಿ ಸಾಲ ಮನ್ನಾ ಯೋಜನೆಗೆ ಅರ್ಹವಾದ ಹಲವಾರು ರೈತರಿಗೆ ಸಾಲ ಮನ್ನಾ ಹಣ ಬಿಡುಗಡೆಯಾಗಿರುವುದಿಲ್ಲ .
ಈ ಬಗ್ಗೆ ಸಾಲ ಮನ್ನಾ ಹಣ ಬಿಡುಗಡೆಯಾಗದೇ ಇರುವ ರೈತ ಸದಸ್ಯರೆಲ್ಲ ದಿನಂಪ್ರತಿ ಬಂದು ಪ್ರಾಥಮಿಕ ಸಹಕಾರ ಸಂಘಗಳ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರನ್ನು ತರಾಟೆಗೆ ತೆಗೆದು ಕೊಳ್ಳುತ್ತಿರುವ ಪ್ರಸಂಗಗಳು ಹಲವು ಕಡೆ ನಡೆಯುತ್ತಿರುತ್ತದೆ .ಸಾಲಮನ್ನಾ ಬಗೆಗಿನ ಹಣವನ್ನು ಸರಕಾರ ಬಿಡುಗಡೆ ಮಾಡದೇ ಸರಕಾರದ ಸಹಕಾರ ಇಲಾಖೆ ಮಾಡಿರುವ ಎಡವಟ್ಟಿಗೆ ಕೆಳಹಂತದಲ್ಲಿರುವ ಪ್ರಾಥಮಿಕ ಸಹಕಾರ ಸಂಘಗಳು ತನ್ನ ಸದಸ್ಯರಿಗೆ ಉತ್ತರಿಸಲಾಗದ ಪರಿಸ್ಥಿತಿ ಉದ್ಭವಿಸಿರುತ್ತದೆ .ಆದುದರಿಂದ ಬಾಕಿ ಉಳಿದಿರುವ ರೈತರ ಸಾಲ ಮನ್ನಾ ಹಣವನ್ನು ಅತೀ ಶೀಘ್ರವಾಗಿ ಬಿಡುಗಡೆ ಮಾಡುವ ಮೂಲಕ ಸರ್ವರಿಗೂ ಸಮಪಾಲು ಸಮಬಾಳು ಪರಿಕಲ್ಪನೆಯನ್ನು ಸಾಕಾರಗೊಳಿಸ ಬೇಕೆಂದು ಈ ಮೂಲಕ ವಿನಂತಿಸುತ್ತೇನೆಂದು ಕೋರಿದ್ದಾರೆ.,