ವಿಟ್ಲ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ರೈತರು ಉಡುಪಿ- ಕಾಸರಗೋಡು 400 ಕೆ. ವಿ ವಿದ್ಯುತ್ ಪ್ರಸರಣ ಮಾರ್ಗವನ್ನು ಕಳೆದ ನಾಲ್ಕೂವರೆ ವರ್ಷಗಳಿಂದ ಯುಟಿಸಿಎಲ್ ಸಂಸ್ಥೆ ಅನುಷ್ಠಾನ ಮಾಡಲು ಹೊರಟಿದೆ. ಜನಸಾಮಾನ್ಯರ ಕಣ್ಣಿಗೆ ಮಣ್ಣೆರಚಿ ಜಿಲ್ಲಾಧಿಕಾರಿ, ತಹಸೀಲ್ದಾರ್ ಸಹಿತ ಅಧಿಕಾರಿಗಳು ಮತ್ತು ಶಾಸಕರು ಸಂಸದರು ಇದರಲ್ಲಿ ಶಾಮೀಲಾಗಿದ್ದಾರೆ ಎಂದು 400 ಕೆ. ವಿ. ವಿದ್ಯುತ್ ಪ್ರಸರಣ ಮಾರ್ಗ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ ಆಕ್ರೋಶ ವ್ಯಕ್ತಪಡಿಸಿದರು.
ವಿಟ್ಲ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಅವರು 3,450 ಎಕರೆ ಸ್ಥಳ, 1,65,000 ದಷ್ಟು ಅಡಿಕೆ ಮರ, 1,20,000 ದಷ್ಟು ಕಾಳು ಮೆಣಸು ಬಳ್ಳಿ ಸಹಿತ ನೂರಾರು ಕೋಟಿ ನಷ್ಟ ರೈತರು ಅನುಭವಿಸಲಿದ್ದಾರೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಕಂಪೆನಿಯ ಜತೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.
ಜಮೀನು ಸ್ವಾಧೀನಕ್ಕೆ ಪಡೆಯುವ ಮೊದಲು ಸರಕಾರ ಅಥವಾ ಸಂಸ್ಥೆ ನೋಟೀಸ್ ನೀಡಬೇಕು ಎಂಬ ನಿಯಮ ಇದೆ. ನಿಯಮವನ್ನು ಗಾಳಿಗೆ ತೂರಿ ಅಧಿಕಾರಿಗಳು ಪಡೆದು ರೈತರ ಹಿತಾಸಕ್ತಿ ಕಡೆಗಣಿಸಿದ್ದಾರೆ .ಕೃಷಿ ಜಮೀನನ್ನು ಬಿಟ್ಟು ಕೊಡಲು ರೈತರಿಗೆ ಬೆದರಿಕೆ ಹಾಕಲಾಗುತ್ತಿದೆ. ಸುಳ್ಳು ಭರವಸೆ ಮತ್ತು ಆಮೀಷ ಒಡ್ಡಲಾಗುತ್ತಿದೆ.ಸಂಸ್ಥೆ ಎಂಜಲು ಕಾಸಿಗೆ ಕೈಒಡುತ್ತಿರುವ ಶಾಸಕ ಸಂಸದ ಹಾಗೂ ಇನ್ನಿತರ ರಾಜಕೀಯ ಮುಖಂಡರನ್ನು ಮುಂದಿಟ್ಟುಕೊಂಡು ಯೋಜನೆ ಅನುಷ್ಠಾನ ಮಾಡಲು ಯತ್ನ ನಡೆದಿದೆ ಎಂದು ರಾಜೀವ ಗೌಡ ಆರೋಪಿಸಿದರು.
ರಾಜ್ಯ ರೈತ ಸಂಘ ( ಹಸಿರುಸೇನೆ,) ಜಿಲ್ಲಾಧ್ಯಕ್ಷ ಬೈಲುಗುತ್ತು ಶ್ರೀಧರ ಶಟ್ಟಿ, ಮಾತನಾಡಿ ಸಂಸದರು, ಶಾಸಕರು ಅಧಿಕಾರಿಗಳು ಗುತ್ತಿಗೆ ಪಡೆದ ಕಂಪೆನಿಯ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಅದಾನಿ ಕಂಪೆನಿಯ ಅಡಿಯಾಳಾಗಿದ್ದಾರೆ. ಮರನಾಶ ಮಾಡುತ್ತಿದ್ದರೂ ಪರಿಸರವಾದಿಗಳು ಮೌನವಾಗಿದ್ದಾರೆ ಪರಿಸರವಾದಿಗಳು ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು. ಇದೇ ತೆರನಾಗಿ ವರ್ತಿಸಿದರೆ ಜನಪ್ರತಿನಿಧಿಗಳಿಗೆ ,ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪಿಂಡ ಬಿಡುವ ಕಾರ್ಯಕ್ರಮ ನಡೆಯಲಿದೆ.ದೈವಸ್ಥಾನ ದೇವಸ್ಥಾನಗಳಲ್ಲಿಸರ್ವನಾಶಕ್ಕೆ ಹರಿಕೆ ಸಲ್ಲಿಸಲಾಗುವುದು ಎಂದರು.
ರೈತ ಸಂಘದ ಚಿತ್ತರಂಜನ್ ಪೂಜಾರಿ, ರೋಹಿತಾಕ್ಷ ಬಂಗ, ಶ್ಯಾಮ್ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.