ಮಲ್ಪೆ: ಮೀನು ವ್ಯಾಪಾರಸ್ಥನ ಮುಖಕ್ಕೆ ಖಾರದ ಪುಡಿ ಎರಚಿ ಹಲ್ಲೆ ನಡೆಸಿ ಚಿನ್ನದ ಸರ ಕಳವುಗೈದ ಘಟನೆ ಫೆ. 20 ರ ಮುಂಜಾನೆ ನಡೆದಿದೆ.
ಹಲ್ಲೆಗೊಳಗಾದ ಮೀನುಗಾರನನ್ನು ಬಡಾನಿಡಿಯೂರು ಗ್ರಾಮದ ದಯಾನಂದ ಕುಂದರ್ ಎಂದು ಗುರುತಿಸಲಾಗಿದೆ.

ದಯಾನಂದ ಕುಂದರ್ ಅವರು ಮುಂಜಾನೆ 3 ಗಂಟೆ ಸುಮಾರಿಗೆ ಎಂದಿನಂತೆ ಮೀನು ವ್ಯಾಪಾರಕ್ಕಾಗಿ ಬಂದಿದ್ದರು. ಈ ವೇಳೆ ಬಂದರು ಸಮೀಪದ ಸಾಹುಕಾರ್ ಬಾರ್ ಬಳಿ ಇರುವ ಕಚೇರಿ ಶೌಚಾಲಯಕ್ಕೆ ಹೋಗಿ ಮರಳುತ್ತಿದ್ದಾಗ, ಮುತ್ತಣ್ಣ ಎಂಬಾತ ಮೀನಿನ ವಿಚಾರವಾಗಿ ಮಾತನಾಡುವ ನಾಟಕವಾಡಿ ಅವರ ಮುಖಕ್ಕೆ ಖಾರದ ಪುಡಿ ಎರಚಿದ್ದಾನೆ.

ಅನಂತರ ಮತ್ತಿಬ್ಬರು ಅಪರಿಚಿತರು ಸ್ಥಳಕ್ಕೆ ಬಂದು ಚಾಕು ತೋರಿಸಿ ಕುತ್ತಿಗೆಯಲ್ಲಿದ್ದ ಸುಮಾರು 6 ಪವನ್ ತೂಕದ ಚಿನ್ನದ ಸರವನ್ನು ನೀಡುವಂತೆ ಬೆದರಿಕೆ ಹಾಕಿದ್ದಾರೆ. ಸರ ನೀಡಲು ನಿರಾಕರಿಸಿದಾಗ ದಯಾನಂದ ಅವರ ಮೇಲೆ ಹಲ್ಲೆ ನಡೆಸಿ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಇಷ್ಟೇ ಅಲ್ಲದೆ, ಪೊಲೀಸರಿಗೆ ಮಾಹಿತಿ ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






