ಬಂಟ್ವಾಳ: ಶ್ರೀ ಕ್ಷೇತ್ರ ಪಾಣೇರು ಭ.1008 ಶ್ರೀ ಅನಂತನಾಥ ತೀರ್ಥಂಕರರ ಜಿನ ಚೈತ್ಯಾಲಯದಲ್ಲಿ ಭವ್ಯ ಏಕಶಿಲಾ ಮಾನಸ್ತಂಭದ ಸ್ಥಾಪನಾ ಕಾರ್ಯಕ್ರಮವು ಫೆ. 20 ರಂದು ವಿದ್ಯುಕ್ತವಾಗಿ ನಡೆಯಿತು.

ಪರಮ ಪೂಜ್ಯ ಮುನಿ ಶ್ರೀ 108 ಚಂದ್ರಸಾಗರ ಮಹಾರಾಜರ ಪುಣ್ಯಸ್ಮರಣೆಯೊಂದಿಗೆ, ಪರಮ ಪೂಜ್ಯ ಮುನಿ ಶ್ರೀ 108 ಪರಮಸಾಗರ ಮಹಾರಾಜರು ಹಾಗೂ ಪರಮ ಪೂಜ್ಯ ಮುನಿ ಶ್ರೀ 108 ಶ್ರೀ ವೀರಸಾಗರ ಮಹಾರಾಜರ ಶುಭಾಶೀರ್ವಾದಗಳೊಂದಿಗೆ, ಸೀಮೆಯ ಗುರುಗಳಾದ ಮೂಡುಬಿದಿರೆ ಶ್ರೀ ಜೈನ ಮಠದ ಪರಮ ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಕಾರ್ಯಕ್ರಮ ನೆರವೇರಿತು.

ಬೆಂಗಳೂರಿನ ಶಶಿಕಲಾ ಹಾಗೂ ಸಂಪತ್ ಕುಮಾರ್ ಮತ್ತು ಅವರ ಮಕ್ಕಳ ಸಹಕಾರದಿಂದ ಏಕಶಿಲಾ ಮಾನಸ್ತಂಭವನ್ನು ಪಾಣೆಮಂಗಳೂರು ಬಸದಿಯ ಸಮಸ್ತ ಶ್ರಾವಕ ಬಂಧುಗಳ ಉಪಸ್ಥಿತಿಯಲ್ಲಿ ಬೃಹತ್ ಕ್ರೇನ್ ಸಹಾಯದಿಂದ ಧಾರ್ಮಿಕ ವಿಧಿ ವಿಧಾನಗಳ ಪೂರ್ವಕವಾಗಿ ಪ್ರತಿಷ್ಠಾಪಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಪಾಣೇರು ಬಸದಿಯ ಸಮಿತಿಯ ಅಧ್ಯಕ್ಷ ಸಂಪತ್ ಕುಮಾರ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಮೋಹನ್ ರಾಜ್ ಚೌಟ, ಕಾರ್ಯದರ್ಶಿಗಳಾದ ಭುವನೇಂದ್ರ ಇಂದ್ರ ಮತ್ತು ಪ್ರಶಾಂತ್ ಜೈನ್, ಕಾರ್ಯನಿರ್ವಾಹಕರಾದ ಧರಣೇಂದ್ರ ಇಂದ್ರರು ಹಾಗೂ ಸಮಿತಿಯ ಸರ್ವ ಸದಸ್ಯರು, ಗಣ್ಯರು ಮತ್ತು ಶ್ರಾವಕರು ಉಪಸ್ಥಿತರಿದ್ದರು.








