ಬೆಳ್ತಂಗಡಿ : ಹೀಲಿಯಂ ಗ್ಯಾಸ್ ಸೋರಿಕೆಯಿಂದ ಬೆಂಕಿ ಅವಘಡ ಸಂಭವಿಸಿ ಅಂಗಡಿ ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಬೆಳ್ತಂಗಡಿ ನಗರದ ಸಂತೆಕಟ್ಟೆಯಲ್ಲಿರುವ ಹೇರಾಜೆ ಕಾಂಪ್ಲೆಕ್ಸ್ ನಲ್ಲಿ ನಡೆದಿದೆ.

ಮೊಹಮ್ಮದ್ ಸಮೀಲ್ ಅವರ ಮಾಲೀಕತ್ವದ KAF ಕ್ರಿಯೇಟಿವ್ ಆರ್ಟ್ & ಕ್ರಾಫ್ಟ್ ಸ್ಟೋರ್ನಲ್ಲಿ ಫೆ. 14ರಂದು ಬೆಳಗ್ಗೆ ಸುಮಾರು 7:30ರ ವೇಳೆಗೆ ಕಾರ್ಯಕ್ರಮವೊಂದಕ್ಕಾಗಿ ಬಲೂನ್‌ಗಳಿಗೆ ಗ್ಯಾಸ್ ತುಂಬಿಸುವ ವೇಳೆ ಹೀಲಿಯಂ ಗ್ಯಾಸ್ ಸೋರಿಕೆಯಾಗಿದ್ದು, ನಂತರ ಸ್ಫೋಟ ಸಂಭವಿಸಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮವಾಗಿ ಅಂಗಡಿ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ.

ಘಟನೆಯ ವೇಳೆ ಅಂಗಡಿಯೊಳಗೆ ಇಬ್ಬರು ಕೆಲಸಗಾರರು ಇದ್ದರು. ಅವರು ತಕ್ಷಣವೇ ಹೊರಗಡೆ ಓಡಿ ಬಂದು ಅಪಾಯದಿಂದ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮತ್ತು ಸ್ಥಳೀಯರು ಧಾವಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಬೆಂಕಿ ತೀವ್ರತೆಗೆ ಅಕ್ಕಪಕ್ಕದ ಅಂಗಡಿಗಳಿಗೂ ಹಾನಿಯಾಗಿದೆ ಎಂದು ತಿಳಿದುಬಂದಿದೆ.







