ಕುಂಬಳೆ: ವ್ಯಾಪಾರಿ ವ್ಯವಸಾಯಿ ಘಟಕದ ಮಾಜಿ ಅಧ್ಯಕ್ಷ ಬಿ. ವಿಕ್ರಂ ಪೈ ಕುಂಬಳೆ ಅವರ ಕಾರಿಗೆ ಬಾಂಬ್ ಇಟ್ಟು ಸ್ಫೋಟಿಸಿದ ಘಟನೆ ಫೆ. 12ರಂದು ನಡೆದಿದೆ.

ಬಿ. ವಿಕ್ರಂ ಪೈ ಅವರು ಪೊಸತ್ತಡ್ಕ ಗೋಶಾಲೆಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ, ಕಾಂಕ್ರೀಟ್ ರಸ್ತೆಯಲ್ಲಿ ಇಡಲಾಗಿದ್ದ ನಾಡ ಬಾಂಬ್ ಸಿಡಿದ ಪರಿಣಾಮ ಕಾರು ಸುಮಾರು ಎರಡು ಅಡಿ ಮೇಲಕ್ಕೆ ಎತ್ತಿ ಮತ್ತೆ ರಸ್ತೆಯ ಮೇಲೆ ಬಿದ್ದಿದೆ. ಘಟನೆಯ ಪರಿಣಾಮವಾಗಿ ಕಾರಿನ ಎರಡು ಚಕ್ರಗಳು ಸ್ಫೋಟಗೊಂಡಿವೆ. ಆದರೂ ಪೈ ಅವರಿಗೆ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಬಿ. ವಿಕ್ರಂ ಪೈ ಅವರು ರಾಜಕೀಯ ಮತ್ತು ಧಾರ್ಮಿಕ ನಾಯಕರಾಗಿದ್ದರು. ಅವರ ಕುಟುಂಬ ಹಿಂದಿನಿಂದಲೂ ಸಂಘಪರಿವಾರದಲ್ಲಿ ಸಕ್ರಿಯವಾಗಿದ್ದು ಅದೇ ಮನೆಯವರಾದ ವಿಕ್ರಂ ಕೂಡ ಸಂಘ ಪರಿವಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ಕುಂಬಳೆ ಗ್ರಾ.ಪಂ. ಚುನಾವಣೆ ಯಲ್ಲಿ ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದರು ಎಂದು ತಿಳಿದುಬಂದಿದೆ.







