Breaking
25 Sep 2026, Fri

ಆನ್‌ಲೈನ್ ಮ್ಯಾಟ್ರಿಮೋನಿಯಲ್ಲಿ ಮದುವೆ ಹೆಸರಿನಲ್ಲಿ ಲಕ್ಷಾಂತರ ವಂಚನೆ: ಆರೋಪಿ ಬಂಧನ

ಮಂಗಳೂರು: ಆನ್‌ಲೈನ್ ಮ್ಯಾಟ್ರಿಮೋನಿಯಲ್ ಪ್ಲಾಟ್‌ಫಾರ್ಮ್‌ ಮೂಲಕ ಪರಿಚಯವಾದ ಹಲವಾರು ಮಹಿಳೆಯರನ್ನು ಮದುವೆಯಾಗಿ ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪಿಯನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಸುಶಾಂತ್ ಪೂಜಾರಿ ಅಲಿಯಾಸ್ ಸುಶಾಂತ್ ಅಂಕುಶ ಪೂಜಾರಿ ಅಲಿಯಾಸ್ ಸುಶಾಂತ್ ಜಿ. ಕರ್ಕೇರ (32) ಎಂದು ಗುರುತಿಸಲಾಗಿದೆ. ವಂಚನೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಮೂಲ್ಕಿ ನಿವಾಸಿ ಭಾಸ್ಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಫೆ. 2, 2025ರಂದು ನವಿ ಮುಂಬೈನಲ್ಲಿ ಮಹಿಳೆಯೊಬ್ಬರನ್ನು ಮದುವೆಯಾಗಿದ್ದು ಮದುವೆಯ ನಂತರ ವಿವಿಧ ಕಾರಣಗಳನ್ನು ನೀಡುತ್ತಾ ಹಂತ ಹಂತವಾಗಿ ಒಟ್ಟು ರೂ. 6.60 ಲಕ್ಷವನ್ನು ಪಡೆದುಕೊಂಡಿದ್ದಾನೆ. ಬಳಿಕ ನವೆಂಬರ್ 15, 2025ರಂದು ನಾಪತ್ತೆಯಾಗಿದ್ದಾನೆ ಎಂದು ಮಹಿಳೆಯೊಬ್ಬರು ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ. ಈ ಕುರಿತು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ತನಿಖೆಯ ವೇಳೆ ಉಡುಪಿ, ಮುಂಬೈ ಹಾಗೂ ಬೆಂಗಳೂರಿನ ತಲಾ ಇಬ್ಬರು ಮಹಿಳೆಯರು ಮತ್ತು ಕಾರ್ಕಳದ ಒಬ್ಬ ಮಹಿಳೆಗೆ ಮದುವೆಯ ಭರವಸೆ ನೀಡಿ ಹಣ ವಂಚಿಸಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ .

ಸಂತ್ರಸ್ತರ ಕುಟುಂಬಗಳ ವಿಶ್ವಾಸ ಗಳಿಸಲು ಉದ್ದೇಶದಿಂದ ಭಾಸ್ಕರ್ ತನ್ನನ್ನು ಸುಶಾಂತ್‌ನ ಚಿಕ್ಕಪ್ಪ ಎಂದು ಪರಿಚಯಿಸಿಕೊಂಡು ಸಹಾಯ ಮಾಡುತ್ತಿದ್ದನು. ಮುಂಬೈನಲ್ಲಿ ನಡೆದ ಧಾರ್ಮಿಕ ಮದುವೆ ಸಮಾರಂಭದಲ್ಲಿಯೂ ಕುಟುಂಬದ ಹಿರಿಯನಂತೆ ನಡೆದುಕೊಂಡು ವಿವಾಹವನ್ನು ಕಾನೂನುಬದ್ಧಗೊಳಿಸಲು ನೇರವಾಗಿದ್ದಾನೆ ಎಂಬ ಆರೋಪವಿದೆ.

ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Leave a Reply

Your email address will not be published. Required fields are marked *