ಕಾಸರಗೋಡು: ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಕಾಸರಗೋಡಿನ ಉಳಿಯತ್ತಡ್ಕ ಗ್ರಾಮದ ರೇಷ್ಮಾ (24) ಎಂದು ಗುರುತಿಸಲಾಗಿದೆ. ಮಾತಿನ ಮಲ್ಲಿ ಸೋಶಿಯಲ್ ಮೀಡಿಯಾ ಇನ್ಫುಯೆನ್ಸರ್ ‘ಚಿನ್ನು ಪಾಪು’ ಎಂದೇ ಜನಪ್ರಿಯರಾಗಿದ್ದರು.

ಕಾಸರಗೋಡು ಜಿಲ್ಲೆಯ ಆದೂರು ನಿವಾಸಿಯಾಗಿದ್ದ ರೇಷ್ಮಾ ಅವರ ಪತಿಗೆ ಸುಮಾರು ತಿಂಗಳ ಹಿಂದೆಯಷ್ಟೇ ವಿಚ್ಛೇದನ ನೀಡಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಫೆ. 09 ರಂದು ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಕುತ್ತಿಗೆಗೆ ಬಿಗಿದ ಹಗ್ಗ ತುಂಡಾಗಿ ನೆಲಕ್ಕೆ ಕುಸಿದ ಸ್ಥಿತಿಯಲ್ಲಿ ಕಂಡುಬಂದ ರೇಷ್ಮಾ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ರೇಷ್ಮಾ ಅವರಿಗೆ ನಾಲ್ಕು ವರ್ಷದ ಪುತ್ರನಿದ್ದು ಆತ ಆದೂರಿನಲ್ಲಿರುವ ಪೋಷಕರ ಮನೆಯಲ್ಲಿದ್ದಾನೆ ಎಂದು ತಿಳಿದುಬಂದಿದೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಕೌಟುಂಬಿಕ ಕಲಹವೇ ಈ ಘಟನೆಗೆ ಕಾರಣವಾಗಿರಬಹುದೆಂದು ಶಂಕಿಸಿ ತನಿಖೆ ನಡೆಸುತ್ತಿದ್ದಾರೆ.







