Breaking
4 Feb 2026, Wed

ವಿಬಿ ಜಿ ರಾಮ್ ಜಿ ಯೋಜನೆ ವಿರುದ್ಧ ಕಾಂಗ್ರೆಸ್ ಅಪ ಪ್ರಚಾರ ಗ್ರಾಮ ಪಂಚಾಯಿತಿ ಮತ್ತಷ್ಟು ಬಲಿಷ್ಟ: ಶಾಸಕ ರಾಜೇಶ ನಾಯ್ಕ್ ಪ್ರತಿಪಾದನೆ

ಬಂಟ್ವಾಳ: ದೇಶದಲ್ಲಿ ಕಳೆದ 20 ವರ್ಷಗಳ ಹಿಂದೆ ಅನುಷ್ಠಾನಗೊಂಡ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ ಪರಿವರ್ತನೆಗೊಳಿಸಿರುವ ವಿಕಸಿತ ಭಾರತ ಜಿ. ರಾಮ್ ಜಿ. ಯೋಜನೆ ಬಗ್ಗೆ ಕಾಂಗ್ರೆಸ್ ಅನಗತ್ಯ ಅಪಪ್ರಚಾರದಲ್ಲಿ ತೊಡಗಿದೆ ಎಂದು ಶಾಸಕ ರಾಜೇಶ ನಾಯ್ಕ್ ಉಳಿಪ್ಪಾಡಿ ಆರೋಪಿಸಿದ್ದಾರೆ.

ಬಿ.ಸಿ.ರೋಡಿನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಈ ಯೋಜನೆಯಡಿ 4 ಲಕ್ಷಕ್ಕೂ ಮಿಕ್ಕಿ ನಕಲಿ ಕಾರ್ಡ್ ಕಂಡು ಬಂದ ಹಿನ್ನೆಲೆಯಲ್ಲಿ ಅಂದಿನ ಕೇಂದ್ರ ಸಚಿವ ಶರದ್ ಪವಾರ್ ಕೂಡಾ ಪರಿಷ್ಕರಣೆಗೆ ಸಲಹೆ ನೀಡಿದ್ದರು. ಈಗಿನ ಪ್ರಧಾನಿ ನರೇಂದ್ರ ಮೋದಿ ಅದನ್ನು ಅನುಷ್ಠಾನಗೊಳಿಸಿದ್ದಾರೆ. ಇದರಿಂದಾಗಿ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುವುದರ ಜೊತೆಗೆ ಗ್ರಾಮ ಪಂಚಾಯಿತಿ ಮತ್ತಷ್ಟು ಬಲಿಷ್ಠಗೊಳ್ಳಲಿದೆ’ ಎಂದರು.

ಕೂಲಿಗೆ ದಿನವೊಂದಕ್ಕೆ ರೂ 174 ಕ್ಕೆ ಬದಲಾಗಿ ರೂ 375 ಕ್ಕೆ ಏರಿಕೆಗೊಳಿಸಲಾಗಿದ್ದು, ಈ ಹಿಂದಿನಂತೆಯೇ ಗ್ರಾಮ ಪಂಚಾಯಿತಿ ಯೋಜನೆ ಅನುಷ್ಠಾನಗೊಳಿಸುವ ಅಧಿಕಾರ ಹೊಂದಿದೆ. ಈ ಹಿಂದೆ ಅರ್ಹ ಫಲಾನುಭವಿಗಳಿಗೆ ಕಾಮಗಾರಿ ಪೂರ್ಣಗೊಂಡರೂ ಕೂಲಿ ಪಾವತಿಯಾಗುತ್ತಿರಲಿಲ್ಲ. ಆದರೆ ಇದೀಗ ಒಂದು ವಾರದೊಳಗೆ ಕೂಲಿ ಪಾವತಿಯಾಗಲಿದೆ ಎಂದು ಅವರು ಹೇಳಿದರು. ವಿಬಿ ಜಿ.ರಾಮ್ ಜಿ. ಹೆಸರಿನಲ್ಲಿ ರಾಮನ ಹೆಸರು ಇರುವುದು ಕಾಂಗ್ರೆಸ್ಸಿಗರಿಗೆ ಸಹಿಸಲು ಅಸಾಧ್ಯವಾಗಿದೆ ಎಂದು ಅವರು ಆರೋಪಿಸಿದರು.

ಬಿಜೆಪಿ ಮುಖಂಡ ವಿಕಾಸ ಪುತ್ತೂರು ಮಾತನಾಡಿ, ‘ದೇಶದಲ್ಲಿ ಈಗಲೂ ಮಹಾತ್ಮಾ ಗಾಂಧೀಜಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹೆಸರಿನಲ್ಲಿ 20ಕ್ಕೂ ಹೆಚ್ಚು ಸಂಸ್ಥೆ, ಪ್ರಶಸ್ತಿಗಳಲ್ಲಿ ಅವರ ಹೆಸರು ಇದೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಕ್ಷೇತ್ರಾಧ್ಯಕ್ಷ ಆರ್.ಚೆನ್ನಪ್ಪ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ಪ್ರಮುಖರಾದ ರಾಜೇಶ್ ರೈ ಕಡೆಂಜಿ, ಶಿವಪ್ರಸಾದ್ ಶೆಟ್ಟಿ, ದೇವಪ್ಪ ಪೂಜಾರಿ, ರವೀಶ್ ಶೆಟ್ಟಿ ಕರ್ಕಳ, ಬಿ.ದಿನೇಶ್ ಭಂಡಾರಿ, ವಸಂತ ಕುಮಾರ್ ಅಣ್ಣಳಿಕೆ, ಜನಾರ್ದನ ಬೊಂಡಾಲ, ಪುರುಷೋತ್ತಮ ಶೆಟ್ಟಿ ವಾಮದಪದವು, ಸಂತೋಷ್ ರಾಯಿ ಬೆಟ್ಟು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *