Breaking
26 Jun 2026, Fri

ಆನ್‌ಲೈನ್ ಬೆಟ್ಟಿಂಗ್ ಹಣ ನೀಡದೆ ಜೀವ ಬೆದರಿಕೆ: ಐವರು ಆರೋಪಿಗಳ ಬಂಧನ

ಉಡುಪಿ: ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ಗೆದ್ದ ಹಣವನ್ನು ನೀಡದೆ ಜೀವಬೆದರಿಕೆ ಹಾಕಿರುವ ಐವರು ಆರೋಪಿಗಳನ್ನು ಕೋಟ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಶಿರಿಯಾರ ಗ್ರಾಮದ ಎತ್ತಿನಟ್ಟಿಯ ರೂಪೇಶ್(23), ಮನೋಜ್(25), ಕೊಳ್ಕೆಬೈಲುವಿನ ಸೃಜನ್ ಶೆಟ್ಟಿ(28), ಪಡುಮುಂಡುವಿನ ರಾಘವೇಂದ್ರ (37), ಶಿರಿಯಾರ ಕುಶಲ(38) ಎಂದು ಗುರುತಿಸಲಾಗಿದೆ.

ಸುಮಾರು ಒಂದು ವರ್ಷದ ಹಿಂದೆ ಬಿಲ್ಲಾಡಿಯ ಸಂದೇಶ್ ಕುಲಾಲ್ ಅವರು ಆನ್‌ಲೈನ್ ಬೆಟ್ಟಿಂಗ್ ನಡೆಸುತ್ತಿದ್ದ ಶಿರಿಯಾರ ನಿವಾಸಿ ಪ್ರದೀಪ್ ಎಂಬಾತನ ಪರಿಚಯವನ್ನು ಮಾಡಿಕೊಂಡಿದ್ದರು. ಪ್ರದೀಪ್‌ ಅವರ ಸೂಚನೆಯಂತೆ ಸಂದೇಶ್‌ ಕುಲಾಲ್‌ ಅವರು ಗೆದ್ದ ಸುಮಾರು 15 ಲಕ್ಷ ರೂ. ಗಳನ್ನು ಆರೋಪಿಗಳ ಮೊಬೈಲ್ ನಂಬರ್‌ಗಳಿಗೆ ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿದ್ದರು.

ವರ್ಗಾವಣೆ ಮಾಡಿದ ಹಣವನ್ನು ಒಂದು ತಿಂಗಳ ಹಿಂದೆ ವಾಪಾಸ್ಸು ಕೇಳಿದಾಗ ಪ್ರದೀಪ್ ಮತ್ತು ಆತನ ತಂಡದವರು ಹಣವನ್ನು ನೀಡಲು ನಿರಾಕರಿಸಿ ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದೀಗ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *