Breaking
11 Aug 2026, Tue

ಒಂದೂವರೆ ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿ ಗರ್ಭಿಣಿ ಮಹಿಳೆ ಆತ್ಮಹತ್ಯೆ

ಕಲಬುರಗಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗರ್ಭಿಣಿ ಮಹಿಳೆಯೊಬ್ಬರು ತಮ್ಮ ಒಂದೂವರೆ ವರ್ಷದ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಆಳಂದ ತಾಲೂಕಿನ ಚಿಂಚನಸೂರು ಗ್ರಾಮದಲ್ಲಿ ಗುರುವಾರ (ಜೂ. 25) ನಡೆದಿದೆ.

ಮೃತರನ್ನು ಅಂಬಿಕಾ (25) ಹಾಗೂ ಅವರ ಒಂದೂವರೆ ವರ್ಷದ ಪುತ್ರಿ ಆರಾಧ್ಯ ಎಂದು ಗುರುತಿಸಲಾಗಿದೆ.

ಮೂರು ವರ್ಷಗಳ ಹಿಂದೆ ಚಿಂಚನಸೂರು ಗ್ರಾಮದ ವೀರಭದ್ರ ಅವರೊಂದಿಗೆ ಅಂಬಿಕಾ ಅವರ ವಿವಾಹವಾಗಿತ್ತು. ಮದುವೆಯಾದ ನಂತರದಿಂದಲೇ ಪತಿ-ಪತ್ನಿಯ ನಡುವೆ ಹೊಂದಾಣಿಕೆಯ ಕೊರತೆಯಿಂದ ನಿತ್ಯ ಕೆಲವು ಕಾರಣಗಳಿಂದ ಕಲಹ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.

ಗುರುವಾರ ಬೆಳಗ್ಗೆ ಅಂಬಿಕಾ ಮನೆಯಿಂದ ಹೊರಟು ಬಾವಿಯ ಬಳಿ ತೆರಳಿದ್ದರು. ಬಾವಿಯ ಅಂಚಿನಲ್ಲಿ ತಮ್ಮ ಚಪ್ಪಲಿಗಳನ್ನು ಬಿಟ್ಟು, ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ಬಾವಿಗೆ ಹಾರಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಬೆಳಗ್ಗೆಯಿಂದ ಅಂಬಿಕಾ ಕಾಣೆಯಾಗಿದ್ದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಮಧ್ಯಾಹ್ನ ಬಾವಿಯ ಬಳಿ ಚಪ್ಪಲಿಗಳು ಪತ್ತೆಯಾದ ಬಳಿಕ ಅನುಮಾನಗೊಂಡು ಪರಿಶೀಲಿಸಿದಾಗ ತಾಯಿ-ಮಗಳ ಮೃತದೇಹಗಳು ಬಾವಿಯಲ್ಲಿ ಪತ್ತೆಯಾಗಿವೆ.

ಘಟನೆ ಕುರಿತು ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *