ಬೆಳ್ತಂಗಡಿ: ತಾಲೂಕಿನ ಮರೋಡಿ ಗ್ರಾಮದ ಪಾಲರಗೋಳಿಯಲ್ಲಿ ಬೈಕ್ ಕದಿಯಲು ಯತ್ನಿಸಿದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಸಾರ್ವಜನಿಕರು ಬೆನ್ನಟ್ಟಿ ಹಿಡಿದು, ಮರಕ್ಕೆ ಕಟ್ಟಿ ಹಾಕಿ ಬಳಿಕ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಆರೋಪಿಗಳನ್ನು ಮಂಗಳೂರು ನಗರದ ಕೂಳೂರು ನಿವಾಸಿಗಳಾದ ಮೊಯಿದ್ದೀನ್ ನಾಸಿರ್ ಮತ್ತು ಅಬ್ದುಲ್ ಸಮದ್ ಎಂದು ಗುರುತಿಸಲಾಗಿದೆ.

ಜ. 20 ರಂದು ನೇಮೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದೇವಿಪ್ರಸಾದ್ ಇತರರೊಂದಿಗೆ ಮನೆಗೆ ಬರುತ್ತಿದ್ದ ವೇಳೆ ಆರೋಪಿಗಳು ಬೈಕ್ ಕದ್ದು ಪರಾರಿಯಾಗುತ್ತಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಅವರನ್ನು ಬೆನ್ನಟ್ಟಿ ತಡೆದಾಗ, ಆರೋಪಿಯೊಬ್ಬ ದೇವಿಪ್ರಸಾದ್ ಮೇಲೆ ಹಲ್ಲೆ ನಡೆಸಿ ಬೈಕ್‌ನೊಂದಿಗೆ ಪರಾರಿಯಾಗಲು ಯತ್ನಿಸಿದನು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸ್ಥಳೀಯ ಸಾರ್ವಜನಿಕರು ಪೊಲೀಸ್ ಆಗಮಿಸುವವರೆಗೂ ಆರೋಪಿಗಳನ್ನು ಮರಕ್ಕೆ ಕಟ್ಟಿ ಹಾಕಿ ಹಿಡಿದುಕೊಂಡು ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.
ದೇವಿಪ್ರಸಾದ್ ನೀಡಿದ ದೂರಿನ ಆಧಾರದ ಮೇಲೆ, ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




