Breaking
23 Mar 2026, Mon

ಜ. 27: ಮಣಿಹಳ್ಳದಿಂದ ಬಿ.ಸಿ.ರೋಡಿನ ಕೈಕಂಬ ತನಕ ಕಾಂಗ್ರೆಸ್ ಪ್ರತಿಭಟನಾ ಮೆರವಣಿಗೆ

ಬಂಟ್ವಾಳ: ದೇಶದಲ್ಲಿ ಈ ಹಿಂದೆ ಪ್ರಧಾನಿ ಡಾ. ಮನಮೋಹನ್ ಸಿಂಗ್ ನೇತೃತ್ವದ ಯು ಪಿ ಎ ಸರ್ಕಾರ ಆಹಾರ ಭದ್ರತೆ ಕಾಯ್ದೆಯಡಿ ಜಾರಿಗೊಳಿಸಿದ್ದ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಗೆ ಮರು ನಾಮಕರಣಗೊಳಿಸಿದ ಕೇಂದ್ರ ಸರ್ಕಾರದ ವಿರುದ್ಧ ಜ.27 ರಂದು ಬೆಳಿಗ್ಗೆ 9.30 ಗಂಟೆಗೆ ಮಣಿಹಳ್ಳದಿಂದ ಬಿ.ಸಿ.ರೋಡು ಕೈಕಂಬ ತನಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ಬಿ. ಸಿ. ರೋಡ್ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಈ ಯೋಜನೆಗೆ ವಿ. ಬಿ. ರಾಮ್ ಜಿ ಎಂದು ಹೆಸರು ಬದಲಾವಣೆಯಿಂದ ಮಹಾತ್ಮಾ ಗಾಂಧೀಜಿ ಅವರಿಗೆ ಅವಮಾನದ ಜೊತೆಗೆ ಗ್ರಾಮ ಪಂಚಾಯಿತಿ ಸ್ವಾಯತ್ತೆಗೆ ಕೂಡಾ ಪೆಟ್ಟು ಬಿದ್ದಿದೆ. ಈ ನಡುವೆ ಕೇಂದ್ರ ಸರ್ಕಾರ ನೀಡಬೇಕಾದ ಅನುದಾನದಲ್ಲಿಯೂ ಕಡಿತಗೊಳಿಸಿದೆ ಎಂದು ಅವರು ಆರೋಪಿಸಿದರು.

ಮೆರವಣಿಗೆ ಬಳಿಕ ಬಿ.ಸಿ.ರೋಡು ಆಡಳಿತ ಸೌಧ ಎದುರು ಬೃಹತ್ ಪ್ರತಿಭಟನೆ ನಡೆಯಲಿದ್ದು, ಜ.20 ರೊಳಗೆ ಪ್ರತೀ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಕಿ.ಮೀ. ಪಾದಯಾತ್ರೆ ನಡೆಸಿ, ಆಯಾಯ ಪಂಚಾಯಿತಿಗೆ ದೂರು ಸಲ್ಲಿಸಲಾಗುವುದು. ಕಾಂಗ್ರೆಸ್ ಬೆಂಬಲಿತ ಆಡಳಿತ ಹೊಂದಿರುವ ಪಂಚಾಯಿತಿನಲ್ಲಿ ಈ ಮರುನಾಮಕರಣ ವಿರುದ್ಧ ನಿರ್ಣಯ ಕೈಗೊಳ್ಳುವುದರ ಜೊತೆಗೆ ಆಡಳಿತ ಇಲ್ಲದ ಪಂಚಾಯಿತಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಕಳೆದ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಂಟ್ವಾಳಕ್ಕೆ ಮಿನಿ ವಿಧಾನಸೌಧ, ಸುಸಜ್ಜಿತ ಬಸ್ ನಿಲ್ದಾಣ, ನಿರೀಕ್ಷಣಾ ಮಂದಿರ ಮತ್ತಿತರ ಸೌಲಭ್ಯ ಒದಗಿಸಿದ್ದಾರೆ. ಇದೇ ವೇಳೆ ಮಂಜೂರುಗೊಂಡ ಅಜಿಲಮೊಗರು-ಕಡೇಶ್ವಾಲ್ಯ ಸೌಹಾರ್ದ ಸೇತುವೆ ಮತ್ತು ಬಂಟ್ವಾಳ ಪಂಜೆ ಮಂಗೇಶರಾಯ ಭವನ ಹಾಗೂ ಬೆಂಜನಪದವು ಕ್ರೀಡಾಂಗಣ ಬಗ್ಗೆ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸಕರ್ಾರ ಮತ್ತು ಶಾಸಕರು ಕಡೆಗಣಿಸಿದ ಪರಿಣಾಮ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಈ ಬಾರಿ ಎಲ್ಲಾ ಕಾಮಗಾರಿ ಪೂರ್ಣಗೊಳಿಸಲು ಶ್ರಮಿಸುತ್ತಿರುವುದಾಗಿ ಅವರು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಅಂಚನ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಭಂಡಾರಿ, ಬೂಡ ಅಧ್ಯಕ್ಷ ಬೇಬಿ ಕುಂದರ್, ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ, ಬಿ. ಪದ್ಮಶೇಖರ್ ಜೈನ್, ಪಿಯೂಸ್ ಎಲ್. ರಾಡ್ರಿಗಸ್, ಅಬ್ಬಾಸ್ ಆಲಿ, ಲುಕ್ಮಾನ್ ಬಂಟ್ವಾಳ, ಲವೀನಾ ವಿಲ್ಮಾ ಮೊರಾಸ್, ಮಲ್ಲಿಕಾ ವಿ. ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *