Breaking
22 Mar 2026, Sun

ಸುಲಿಗೆ ಪ್ರಕರಣದಲ್ಲಿ ಶಿಕ್ಷೆ ಪ್ರಕಟವಾದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಮಂಗಳೂರು: ಸುಲಿಗೆ ಪ್ರಕರಣದಲ್ಲಿ ಶಿಕ್ಷೆ ಪ್ರಕಟವಾದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ಪೂರ್ವ ಪೊಲೀಸ್ ಠಾಣೆಯ ವಾರಂಟ್ ಜಾರಿ ಸಿಬ್ಬಂದಿ ಜ.14ರಂದು ಸುರತ್ಕಲ್‌ನ ಹೊನ್ನಕಟ್ಟೆಯ ಸುಪ್ರಭಾತ ಬಾರ್ ಆಂಡ್ ರೆಸ್ಟೋರೆಂಟ್ ನಲ್ಲಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬಂಧಿತ ಆರೋಪಿಯನ್ನು ತೊಕ್ಕೊಟ್ಟು ಚಂಬುಗುಡ್ಡೆ, ಪೆರ್ಮನ್ನೂರು ಅಂಚೆ, ಮಂಗಳೂರು ನಿವಾಸಿ ನವೀನ್ ಸಿಕ್ವೇರಾ (52) ಎಂದು ಗುರುತಿಸಲಾಗಿದೆ.

ಆರೋಪಿಗೆ 2015ರಲ್ಲಿ ನ್ಯಾಯಾಲಯವು ಮೂರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರೂ.5,000 ದಂಡ ವಿಧಿಸಿ ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಆರೋಪಿ ಮಾನ್ಯ ಉಚ್ಚ ನ್ಯಾಯಾಲಯಕ್ಕೆ ಕ್ರಿಮಿನಲ್ ರಿಟ್ ಅರ್ಜಿ ಸಲ್ಲಿಸಿದ್ದನು. ಅರ್ಜಿ ಪರಿಶೀಲಿಸಿದ ಉಚ್ಚ ನ್ಯಾಯಾಲಯವು ಆರೋಪಿಗೆ ಒಂದು ವರ್ಷ ಸಾದಾ ಸೆರೆವಾಸ ಮತ್ತು ರೂ.15,000 ದಂಡ ವಿಧಿಸಿ, ಈ ಶಿಕ್ಷೆಯನ್ನು 2022ರೊಳಗೆ ಅನುಭವಿಸುವಂತೆ ಆದೇಶಿಸಿತ್ತು.

ಆದರೆ ಆರೋಪಿ ಶಿಕ್ಷೆಯನ್ನು ಅನುಭವಿಸದೆ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ, ಇದೀಗ ಸಂಬಂಧಿಸಿದ ನ್ಯಾಯಾಲಯವು ಹಿಂದಿನ ತೀರ್ಪಿನಂತೆ ಮೂರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರೂ.5,000 ದಂಡ ವಿಧಿಸಿ ಅಂತಿಮ ಆದೇಶ ಹೊರಡಿಸಿದೆ.

Leave a Reply

Your email address will not be published. Required fields are marked *