ಕಾರ್ಕಳ: ನಕ್ಸಲ್ ನಿಗ್ರಹ ಪಡೆ (ಎಎನ್ಎಫ್) ಹಾಗೂ ನಕ್ಸಲೀಯರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ, ನಕ್ಸಲ್ ನಾಯಕನೋರ್ವ ಪೊಲೀರ ಗುಂಡಿಗೆ ಬಲಿಯಾದ ಘಟನೆ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಕಬ್ಬಿನಾಲೆ ಬಳಿ ಸೋಮವಾರ ಸಂಜೆ ನಡೆದಿದೆ.
ನೇತ್ರಾವತಿ ದಳದ ಮುಖ್ಯಸ್ಥ ವಿಕ್ರಂಗೌಡ ಮೃತಪಟ್ಟ ನಕ್ಸಲ್ ನಾಯಕ ಎಂದು ಹೇಳಲಾಗಿದೆ. ಉಳಿದಂತೆ ಸ್ಥಳದಲ್ಲಿದ್ದ ಮೂವರು ನಕ್ಸಲೀಯರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಎಎನ್ಎಫ್ ಪೊಲೀಸರು ಕೂಂಬಿಂಗ್ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ ಎಂದು ಹೇಳಲಾಗಿದೆ.
ಆದರೆ ನಕ್ಸಲ್ ಎನ್ ಕೌಂಟರ್ ಕುರಿತಂತೆ ಪೊಲೀಸ್ ಇಲಾಖೆ ಯಾವುದೇ ಅದಿಕೃತ ಮಾಹಿತಿ ನೀಡಿಲ್ಲ. ಇನ್ನಷ್ಟೆ ಈ ಕುರಿತಂತೆ ಹೆಚ್ಚಿನ ವಿವರಗಳು ಲಭ್ಯವಾಗಬೇಕಿದೆ.
ಈ ಹಿಂದೆ ಮಲೆನಾಡು ಭಾಗದ ವಿವಿಧೆಡೆ, ನಕ್ಸಲರ ಚಟುವಟಿಕೆಗಳು ಕಂಡುಬಂದಿದ್ದವು. ಕಾಲಕ್ರಮೇಣ ಚಟುವಟಿಕೆಗಳು ಕಡಿಮೆಯಾಗಿದ್ದವು. ಇತ್ತೀಚಿನ ವರ್ಷಗಳಲ್ಲಿ ನಕ್ಸಲರ ಚಲನವಲನದ ಯಾವುದೇ ಕುರುಹುಗಳು ಕಂಡುಬಂದಿರಲಿಲ್ಲ.ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಕಡೇಗುಂದಿ ಗ್ರಾಮದ ಒಂಟಿ ಮನೆಯೊಂದಕ್ಕೆ, ನಕ್ಸಲೀಯರ ತಂಡ ಬಂದು ಹೋಗಿದ್ದು ಬೆಳಕಿಗೆ ಬಂದಿತ್ತು. ಇದರ ಬೆನ್ನಲ್ಲೇ, ಮಲೆನಾಡಿನ ಕಾಡುಗಳಲ್ಲಿ ಮತ್ತೆ ನಕ್ಸಲೀಯರು ಸಕ್ರಿಯರಾಗಿದ್ದರು. ಎಚ್ಚೆತ್ತುಕೊಂಡಿದ್ದ ಪೊಲೀಸ್ ಇಲಾಖೆ, ನಕ್ಸಲೀಯರ ಶೋಧ ಕಾರ್ಯಾಚರಣೆಯನ್ನು ಬಿರುಸುಗೊಳಿಸಿತ್ತು