Breaking
4 Feb 2026, Wed

ಕಾರ್ಕಳದಲ್ಲಿ 20 ಅಡಿ ಆಳದ ಬಾವಿಗೆ ಬಿದ್ದ ವ್ಯಕ್ತಿಯ ರಕ್ಷಣೆ

ಕಾರ್ಕಳ: ಆಕಸ್ಮಿಕವಾಗಿ 20 ಅಡಿ ಆಳದ ಬಾವಿಗೆ ಬಿದ್ದ ವ್ಯಕ್ತಿಯನ್ನು ಅಗ್ನಿಶಾಮಕದಳದ ಸಿಬ್ಬಂದಿಗಳು ರಕ್ಷಣೆ ಮಾಡಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ.

ಮೂಡುಬಿದಿರೆ ತಾಲೂಕಿನ ಪುತ್ತಿಗೆ ಪದವು ಬಂಗ್ಲೆ ನಿವಾಸಿ ರಾಧಾಕೃಷ್ಣ (38) ಎಂಬುವವರು ಈ ಭೀಕರ ಅವಘಡದಿಂದ ಪಾರಾದ ವ್ಯಕ್ತಿಯಾಗಿದ್ದಾರೆ.

ರಾಧಾಕೃಷ್ಣ ಅವರು ಕತ್ತಲೆಯಲ್ಲಿ ಬೆಳಕಿನ ವ್ಯವಸ್ಥೆಗಳು ಇಲ್ಲದೇ ಸಂಚರಿಸುತ್ತಿದ್ದಾಗ ದಾರಿ ತಪ್ಪಿ ಆವರಣ ಗೋಡೆ ಇಲ್ಲದ ತೆರೆದ ಸುಮಾರು 20 ಅಡಿ ಉದ್ದದ ಕಿರಿದಾದ ಸುರಂಗದ ಗುಂಡಿಯೊಳಗೆ ಜಾರಿ ಬಿದ್ದಿದ್ದಾರೆ.

ಒಟ್ಟಾರೆ ಸುಮಾರು 50 ಅಡಿಗಳಿಗೂ ಹೆಚ್ಚು ಆಳದಲ್ಲಿ, ಕಡು ಕತ್ತಲೆಯ ನಡುವೆ ಅರೆಪ್ರಜ್ಞಾವಸ್ಥೆಯಲ್ಲಿದ್ದ ಇವರು ಹೊರಬರಲಾಗದೆ ಕಿರುಚಾಡುತ್ತಿದ್ದರು. ಸ್ಥಳೀಯ ಕಾರ್ಮಿಕರು ಇವರ ಚೀರಾಟವನ್ನು ಕೇಳಿ ತಕ್ಷಣವೇ ಎಚ್ಚೆತ್ತುಕೊಂಡು ಕಾರ್ಕಳ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

ಕೂಡಲೇ ಕಾರ್ಯಪ್ರವೃತ್ತರಾದ ಸಹಾಯಕ ಠಾಣಾಧಿಕಾರಿ ಚಂದ್ರಶೇಖರ್ ಹಾಗೂ ಅವರ ತಂಡದ ಸಿಬ್ಬಂದಿಗಳಾದ ಜಯಮೂಲ್ಯ, ರೂಪೇಶ್, ನಿತ್ಯಾನಂದ, ಬಸವರಾಜ ಮತ್ತು ಗಣೇಶ್ ಅವರು ಜೀವದ ಹಂಗು ತೊರೆದು ಬಾವಿಗಿಳಿದು ಸುರಂಗದಲ್ಲಿದ್ದ ವ್ಯಕ್ತಿಯನ್ನು ಯಶಸ್ವಿಯಾಗಿ ಮೇಲೆತ್ತಿದ್ದಾರೆ.

ಅಗ್ನಿಶಾಮಕ ದಳದ ಈ ಸಮಯೋಚಿತ ಸಾಹಸಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *