ಬಂಟ್ವಾಳ: 41 ಗ್ರಾಮಗಳಿಗೆ ಸಂಬಂಧಿಸಿದಂತೆ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಜನವರಿ 18 ರಿಂದ ಫೆ.1ರ ತನಕ ಒಟ್ಟು 12 ಕಡೆಗಳಲ್ಲಿ ‘ಹಿಂದೂ ಸಂಗಮ’ ಎಂಬ ವಿನೂತನ ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಯಕ್ರಮ ಸಂಯೋಜಕ ವಕೀಲ ಪ್ರಸಾದ್ ಕುಮಾರ್ ಹೇಳಿದ್ದಾರೆ.
ಬಿ.ಸಿ.ರೊಡಿನಲ್ಲಿ ಗುರುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಕೌಟುಂಬಿಕ ಮೌಲ್ಯಗಳ ಪುನರುತ್ಥಾನ, ಸಾಮಾಜಿಕ ಸಾಮರಸ್ಯದ ಜಾಗರಣ, ಪರಿಸರ ಸಂರಕ್ಷಣೆಯ ಸಂಕಲ್ಪ, ಸ್ವಾವಲಂಬಿ ಮತ್ತು ಸ್ವಾಭಿಮಾನಿ ಜೀವನ ಪದ್ಧತಿ ಹಾಗೂ ನಾಗರಿಕ ಕರ್ತವ್ಯಗಳ ಪಾಲನೆಗೆ ಸಂಬಂಧಿಸಿದಂತೆ ‘ಪಂಚ ಪರಿವರ್ತನೆ ‘ ಬಗ್ಗೆ ಜನಜಾಗೃತಿ ಮೂಡಿಸಲು ಈ ಹಿಂದೂ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದರು.

ಫರಂಗಿಪೇಟೆ ಆಂಜನೇಯ ದೇವಸ್ಥಾನ ಮತ್ತು ಚೆನ್ನೈತ್ತೋಡಿ ವ್ಯಾಪ್ತಿಯ ಆಲದಪದವು ಎಂಬಲ್ಲಿ ಜ.18ರಂದು ಸ್ಥಳೀಯ ಗ್ರಾಮಗಳನ್ನು ಒಟ್ಟುಗೂಡಿಸಿಕೊಂಡು ಶೋಭಾಯಾತ್ರೆ ಮತ್ತು ಸಮಾವೇಶ ನಡೆಯಲಿದೆ.
ಜ.25ರಂದು ಸಂಗಬೆಟ್ಟು ಗ್ರಾಮದ ಸಿದ್ಧಕಟ್ಟೆ ಕೇಂದ್ರ ಮೈದಾನ, ಬಿ.ಕಸ್ಬಾ ಗ್ರಾಮದ ಮಣಿಹಳ್ಳ ಪಡ್ಪು ಮೈದಾನ, ಅರಳ ವ್ಯಾಪ್ತಿಯ ರಾಯಿ ಶ್ರೀಯಾ ಗಾರ್ಡನ್, ಕರಿಯಂಗಳ ಗ್ರಾಮದ ಪೊಳಲಿ ಚೆಂಡಿನ ಗದ್ದೆಯಲ್ಲಿ ಶೋಭಾಯಾತ್ರೆ ಮತ್ತು ಸಮಾವೇಶ ನಡೆಯಲಿದೆ.

ಫೆ.1ರಂದು ಸರಪಾಡಿ ಗ್ರಾಮ ವ್ಯಾಪ್ತಿಯ ಪೆರಿಯಪಾದೆ ದುಗ್ಗಲಾಯ ಕೊಡಮಣಿತ್ತಾಯ ದೈವಸ್ಥಾನ ಬಳಿ, ಮೇರಮಜಲು ಗ್ರಾಮ ವ್ಯಾಪ್ತಿಯ ಬ್ರಹ್ಮರಕೂಟ್ಲು ಪೆರಿಯೋಡಿಬೀಡು ಬಾಕಿಮಾರು ಗದ್ದೆ, ಕಾವಳಮೂಡೂರು ಗ್ರಾಮದ ಕೊಡಮಣಿತ್ತಾಯ ದೈವಸ್ಥಾನ ಬಳಿ, ಅಮ್ಟಾಡಿ ಗ್ರಾಮದ ಕಿನ್ನಿಬೆಟ್ಟು ಸಂಗಮ ಮೈದಾನ, ಬಿ.ಮೂಡ ಗ್ರಾಮದ ಮಹಾಕಾಳಿಬೆಟ್ಟು ಮೈದಾನ, ಉಳಿ ಗ್ರಾಮದ ಪಂಚ ದುರ್ಗಾಪರಮೇಶ್ವರಿ ದೇವಸ್ಥಾನ ಬಳಿ ಶೋಭಾಯಾತ್ರೆ ಮತ್ತು ಸಮಾವೇಶ ನಡೆಯಲಿದೆ. ಪ್ರತೀ ಕಾರ್ಯಕ್ರಮದಲ್ಲಿ ಒಬ್ಬರು ಸಂಪನ್ಮೂಲ ವ್ಯಕ್ತಿ ದಿಕ್ಸೂಚಿ ಭಾಷಣ ಮಾಡಲಿದ್ದು, ಸ್ಥಳೀಯ ಸ್ವಾಮೀಜಿ ಮತ್ತು ಮಹಿಳಾ ಪ್ರತಿನಿಧಿ ಪಾಲ್ಗೊಳ್ಳುವರು ಎಂದು ಅವರು ವಿವರಿಸಿದರು.

ಇದೇ ವೇಳೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದು ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಕರ್ಪೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷ ರಾಮದಾಸ್ ಬಂಟ್ವಾಳ, ಮಹಿಳಾ ಸಂಯೋಜಕಿ ಸುಲೋಚನಾ ಜಿ.ಕೆ.ಭಟ್, ಪ್ರಮುಖರಾದ ಉಮೇಶ್ ಶೆಟ್ಟಿ ಬರ್ಕೆ, ಅನಿಲ್ ಪಂಡಿತ್, ಮಚ್ಚೇಂದ್ರ ಸಾಲ್ಯಾನ್, ಡೊಂಬಯ್ಯ ಅರಳ, ದಾಮೋದರ ನೆತ್ತರಕೆರೆ, ಸಂತೋಷ್ ಸರಪಾಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


