Breaking
26 Sep 2026, Sat

ಧನು ಪೂಜೆಗೆ ಹೋಗಿ ನಾಪತ್ತೆಯಾಗಿದ್ದ 9ನೇ ತರಗತಿಯ ಸುಮಂತ್ ಶವವಾಗಿ ಪತ್ತೆ

ಬೆಳ್ತಂಗಡಿ : ತಾಲೂಕಿನ ಕುವೆಟ್ಟು ಗ್ರಾಮದ ಸಂಬೋಳ್ಯ ಬರಮೇಲು ಧನು ಪೂಜೆಗೆ ಹೋಗಿ ನಾಪತ್ತೆಯಾಗಿದ್ದ ಬಾಲಕ ಮನೆಯ ಸಮೀಪದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಬರಮೇಲು ನಿವಾಸಿಯಾಗಿರುವ ಸುಬ್ರಹ್ಮಣ್ಯ ನಾಯಕ್ ಅವರ ಪುತ್ರ ಗೇರುಕಟ್ಟೆ ಪ್ರೌಢ ಶಾಲೆಯಲ್ಲಿ 9ನೇ ತರಗತಿಯ ಓದುತ್ತಿರುವ ಸುಮಂತ್ (15) ಶವವಾಗಿ ಪತ್ತೆಯಾದ ಬಾಲಕನಾಗಿದ್ದಾನೆ.

ನಾಳ ದೇವಸ್ಥಾನದಲ್ಲಿ ನಡೆಯುವ ಧನು ಪೂಜೆಗೆ ಪ್ರತಿನಿತ್ಯದಂತೆ ಸುಮಂತ್ ಸೇರಿದಂತೆ ಮೂರು ಮಂದಿ ಬಾಲಕರು ಒಟ್ಟಿಗೆ ಹೋಗುತ್ತಿದ್ದು, ಇಂದು ಮುಂಜಾನೆ ಸುಮಂತ್ ಮನೆಯಿಂದ ಬರುವಾಗ ತಡವಾದ್ದರಿಂದ ಇಬ್ಬರು ಬಾಲಕರು ಆತನಿಗಾಗಿ ಕಾದು ದೇವಸ್ಥಾನಕ್ಕೆ ತೆರಳಿದ್ದರು. ಆದರೆ ಸುಮಂತ್ ಮನೆಯಿಂದ ಹೊರಟ್ಟಿದ್ದರು ದೇವಸ್ಥಾನಕ್ಕೆ ಬಂದಿರಲಿಲ್ಲ. ಇದರಿಂದ ಸಂಶಯಗೊಂಡ ಬಾಲಕರು ಆತನ ಮನೆಗೆ ಪೋನ್ ಮಾಡಿದಾಗ ಸುಮಂತ್ ಮನೆಯವರು ಆತ ದೇವಸ್ಥಾನಕ್ಕೆ ಮುಂಜಾನೆಯೇ ಹೋಗಿದ್ದಾನೆ ಎಂದು ತಿಳಿಸಿದ್ದರು.

ಆದರೆ ಆತ ದೇವಸ್ಥಾನಕ್ಕೆ ಬಂದಿಲ್ಲ ಎಂದು ಬಾಲಕರು ಹೇಳಿದಾಗ ಮನೆಯವರು ಆತಂಕಗೊಂಡು ಸ್ಥಳೀಯವಾಗಿ ಮಾಹಿತಿ ನೀಡಿದರು. ಬಾಲಕ ಬರುವ ದಾರಿಯ ನಡುವೆ ಕೆರೆ ಬಳಿ ರಕ್ತದ ಕಲೆಗಳು ಸ್ಥಳೀಯರಿಗೆ ಕಂಡು ಬಂದಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆಯವರು, ಪೊಲೀಸ್ ಇಲಾಖೆ , ಅಗ್ನಿ ಶಾಮಕ ದಳ ಸ್ಥಳೀಯರು ಸೇರಿ ತೀರಾ ಹುಡುಕಾಟ ನಡೆಸಿದ್ದು ಇದೀಗ ಬಾಲಕನ ಮೃತ ದೇಹ ಕೆರೆಯಲ್ಲಿ ಪತ್ತೆಯಾಗಿದೆ.

ಮಗನ ಶವ ನೋಡಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Leave a Reply

Your email address will not be published. Required fields are marked *