Breaking
25 Sep 2026, Fri

ಕಸ ಗುಡಿಸುವಾಗ ಪೌರಕಾರ್ಮಿಕ ಮಹಿಳೆಗೆ ಸಿಕ್ಕ 45 ಲಕ್ಷ ಮೌಲ್ಯದ ಚಿನ್ನದ ಗಂಟು, ಪೊಲೀಸರಿಗೆ ಒಪ್ಪಿಸಿದ ಮಹಿಳೆ

ಚೆನ್ನೈ: ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ 45 ಲಕ್ಷ ಮೌಲ್ಯದ ಬಂಗಾರ ಸಿಕ್ಕಿದ್ದು ಅದನ್ನು ಆಕೆ ಪೊಲೀಸರಿಗೆ ಒಪ್ಪಿಸಿದ ಘಟನೆ ಚೆನ್ನೈ ನಲ್ಲಿ ನಡೆದಿದೆ.

ಗ್ರೇಟರ್ ಚೆನ್ನೈ ಕಾರ್ಪೊರೇಷನ್ನಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಪದ್ಮಾ ಎಂಬುವವರೇ ಚಿನ್ನವನ್ನು ಮರಳಿಸಿ ಪ್ರಾಮಾಣಿಕತೆ ಮೆರೆದಿರುವ ಮಹಿಳೆಯಾಗಿದ್ದಾರೆ.

ಭಾನುವಾರದಂದು ಬೆಳಿಗ್ಗೆ ಪದ್ಮಾ ಅವರು ಟಿ. ನಗರದ ಮುಪ್ಪತ್ತಮ್ಮನ್ ವಿಲ್ ರಸ್ತೆಯಲ್ಲಿ ಎಂದಿನಂತೆ ಕಸ ಗುಡಿಸುವ ಕೆಲಸದಲ್ಲಿ ತೊಡಗಿದ್ದರು. ಈ ವೇಳೆ ರಸ್ತೆ ಬದಿಯಲ್ಲಿ ಬಿದ್ದಿದ್ದ ಒಂದು ಪ್ಲಾಸ್ಟಿಕ್ ಕವರ್ ಅವರ ಗಮನ ಸೆಳೆಯಿತು. ಕುತೂಹಲದಿಂದ ಅದನ್ನು ತೆರೆದು ನೋಡಿದಾಗ ಅವರಿಗೆ ಶಾಕ್ ಕಾದಿತ್ತು. ಅದರಲ್ಲಿ ಬೃಹತ್ ಪ್ರಮಾಣದ ಚಿನ್ನದ ಆಭರಣಗಳಿದ್ದವು.

ಈ ವೇಳೆ ತಕ್ಷಣ ಅವರು ಬಜಾರ್ ಪೊಲೀಸ್ ಠಾಣೆಗೆ ಒಪ್ಪಿಸಿದ್ದು ಪೊಲೀಸರು ಆ ಚೀಲವನ್ನು ಪರಿಶೀಲಿಸಿದಾಗ ಅದರಲ್ಲಿ 45 ಸವರನ್ (ಸುಮಾರು 360 ಗ್ರಾಂ) ಚಿನ್ನದ ಆಭರಣಗಳಿರುವುದು ಪತ್ತೆಯಾಗಿದೆ. ಇದರ ಮಾರುಕಟ್ಟೆ ಮೌಲ್ಯ ಅಂದಾಜು 45 ಲಕ್ಷ ರೂಪಾಯಿಗಳಿಗೂ ಅಧಿಕ ಎಂದು ಅಂದಾಜಿಸಲಾಗಿದೆ.

ಇದೇ ವೇಳೆ ಇತ್ತ ನಂಗನಲ್ಲೂರು ನಿವಾಸಿಯಾಗಿರುವ ರಮೇಶ್ ಅವರು ತಮ್ಮ 45 ಸವರನ್ ಚಿನ್ನ ನಾಪತ್ತೆಯಾಗಿರುವುದಾಗಿ ದೂರು ನೀಡಿದ್ದರು. ಹಳೆ ಚಿನ್ನದ ವ್ಯಾಪಾರಿಯಾದ ರಮೇಶ್, ಶನಿವಾರ ಸಂಜೆ ಟಿ. ನಗರಕ್ಕೆ ಸ್ನೇಹಿತನನ್ನು ಭೇಟಿಯಾಗಲು ಬಂದಿದ್ದರು. ಈ ವೇಳೆ ರಸ್ತೆ ಬದಿಯ ತಳ್ಳುಗಾಡಿಯ ಬಳಿ ಚಿನ್ನದ ಚೀಲವನ್ನಿಟ್ಟು ಮರೆತು ಹೋಗಿದ್ದರು.

ಪೊಲೀಸರು ಈ ದಾಖಲೆಗಳನ್ನು ಪರಿಶೀಲಿಸಿ, ರಮೇಶ್ ಅವರೇ ಅಸಲಿ ಮಾಲೀಕರೆಂದು ಖಚಿತಪಡಿಸಿಕೊಂಡು ಚಿನ್ನವನ್ನು ಹಸ್ತಾಂತರಿಸಿದರು.

Leave a Reply

Your email address will not be published. Required fields are marked *