ಸಿದ್ಧಕಟ್ಟೆ : ಸಹಕಾರ ಸಂಘಗಳ ಸದಸ್ಯರ ಆರೋಗ್ಯ ಭದ್ರತೆಗೆ ಜಾರಿಯಲ್ಲಿರುವ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು 2025–26ನೇ ಸಾಲಿಗೆ ಸಂಬಂಧಿಸಿದಂತೆ ಮರುಜಾರಿಗೊಳಿಸಲಾಗಿದ್ದು, ಈಗಾಗಲೇ ಯೋಜನೆಯಲ್ಲಿ ನೋಂದಾಯಿಸಿಕೊಂಡಿರುವ ಸದಸ್ಯರಿಗೆ ನವೀಕರಣದ ಅವಕಾಶ ಹಾಗೂ ಹೊಸ ಸದಸ್ಯರಿಗೆ ಹೊಸ ನೋಂದಣಿ ಸೌಲಭ್ಯ ಕಲ್ಪಿಸಲಾಗಿದೆ.
ಈ ಯೋಜನೆಯಡಿ ಫಲಾನುಭವಿಗಳ ಕುಟುಂಬಕ್ಕೆ ವಾರ್ಷಿಕ ರೂ.5 ಲಕ್ಷವರೆಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಸೌಲಭ್ಯ ಲಭ್ಯವಿರುತ್ತದೆ. 2025–26ನೇ ಸಾಲಿಗೆ ಸಂಬಂಧಿಸಿದಂತೆ ಚಿಕಿತ್ಸಾ ಅವಧಿಯನ್ನು 2026 ಎ. 01 ರಿಂದ 2027 ಮಾ. 31 ರವರೆಗೆ ನಿಗದಿಪಡಿಸಲಾಗಿದೆ.

ಯಶಸ್ವಿನಿ ಯೋಜನೆಗೆ ನೋಂದಣಿ ಪ್ರಕ್ರಿಯೆ 2026ರ ಜನವರಿ 3ರಿಂದ ಆರಂಭಗೊಂಡಿದ್ದು, 2026ರ ಮಾರ್ಚ್ ತಿಂಗಳ ಅಂತ್ಯದವರೆಗೆ ನಡೆಯಲಿದೆ. ಸಹಕಾರ ಸಂಘಗಳ ಸದಸ್ಯರು ಆಧಾರ್ ಕಾರ್ಡ್, ಪಡಿತರ ಚೀಟಿ ಜೆರಾಕ್ಸ್ ಪ್ರತಿ ಹಾಗೂ ಭಾವಚಿತ್ರದೊಂದಿಗೆ ತಾವು ಸದಸ್ಯರಾಗಿರುವ ಸಂಘದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಯಾವುದೇ ಸಹಕಾರಿ ಸಂಘದಲ್ಲಿ ಕನಿಷ್ಠ ಒಂದು ತಿಂಗಳು ಸದಸ್ಯತ್ವ ಪೂರ್ಣಗೊಳಿಸಿರುವ ರೈತ ಸದಸ್ಯರು ಈ ಯೋಜನೆಗೆ ಅರ್ಹರಾಗಿರುತ್ತಾರೆ. ಗ್ರಾಮೀಣ ಸಹಕಾರ ಸಂಘಗಳ ವ್ಯಾಪ್ತಿಯಲ್ಲಿ ಕುಟುಂಬದಲ್ಲಿ ನಾಲ್ಕು ಸದಸ್ಯರ ತನಕ ರೂ.500 ಶುಲ್ಕ ನಿಗದಿಪಡಿಸಲಾಗಿದ್ದು, ಪಡಿತರ ಚೀಟಿಯಲ್ಲಿ ನಾಲ್ಕು ಸದಸ್ಯರ ನಂತರ ಪ್ರತಿಯೊಬ್ಬ ಹೆಚ್ಚುವರಿ ಸದಸ್ಯರಿಗೆ ತಲಾ ರೂ.100 ಪಾವತಿಸಬೇಕಾಗುತ್ತದೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸದಸ್ಯರು ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಿದಲ್ಲಿ ಉಚಿತವಾಗಿ ನೋಂದಣಿ ಹಾಗೂ ನವೀಕರಣ ಸೌಲಭ್ಯ ಪಡೆಯಬಹುದು.
ಆಸಕ್ತ ರೈತ ಸದಸ್ಯರು ಹಾಗೂ ಅವರ ಕುಟುಂಬದವರು ತಮ್ಮ ವ್ಯಾಪ್ತಿಯ ಸಮೀಪದ ಪ್ರಾಥಮಿಕ ಸಹಕಾರ ಸಂಘಗಳನ್ನು ಸಂಪರ್ಕಿಸಿ ಅಗತ್ಯ ದಾಖಲೆಗಳೊಂದಿಗೆ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಗೆ ನೋಂದಾಯಿಸಿಕೊಂಡು ಇದರ ಸದುಪಯೋಗ ಪಡೆಯಬೇಕು ಎಂದು ಸಿದ್ಧಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅವರು ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.




