Breaking
25 Sep 2026, Fri

ಪರ್ಕಳದಲ್ಲಿ ಟೆಂಪೋ ಟ್ರಾವೆಲರ್ ಗೆ ಕಾರು ಡಿಕ್ಕಿ , ಚಾಲಕ ಗಂಭೀರ

ಉಡುಪಿ: ಕಾರೊಂದು ಟೆಂಪೋ ಟ್ರಾವೆಲರ್ ಗೆ ಡಿಕ್ಕಿ ಹೊಡೆದಿದ್ದು ಕಾರು ಚಾಲಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಉಡುಪಿ ಜಿಲ್ಲೆಯ ಪರ್ಕಳದಲ್ಲಿ ಇಂದು ಮಂಜಾನೆಯ ವೇಳೆ ನಡೆದಿದೆ.

ಪರ್ಕಳದ ಕೆನರಾ ಬ್ಯಾಂಕ್ ಸಮೀಪದ ತಿರುವಿನಲ್ಲಿ ಈ ಅಪಘಾತ ಸಂಭವಿಸಿದೆ.

ಈ ಪರಿಸರದಲ್ಲಿ ಮುಂಜಾನೆಯ ವೇಳೆ ಅತಿಯಾದ ಮಂಜು ಕವಿದಿತ್ತು. ಹಿರಿಯಡಕ ಕಡೆಯಿಂದ ಉಡುಪಿ ಕಡೆಗೆ ವೇಗವಾಗಿ ಬರುತ್ತಿದ್ದ ಕಾರಿನ ಚಾಲಕನಿಗೆ ಮಂಜಿನ ಕಾರಣದಿಂದ ರಸ್ತೆಯ ತಿರುವು ಸರಿಯಾಗಿ ಗೋಚರಿಸಿಲ್ಲ. ಹೀಗಾಗಿ ನಿಯಂತ್ರಣ ತಪ್ಪಿದ ಕಾರು ರಸ್ತೆಯ ಬಲಬದಿಗೆ ನುಗ್ಗಿ, ಎದುರಿನಿಂದ ಬರುತ್ತಿದ್ದ ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಡಿಕ್ಕಿಗೊಳಗಾದ ಟೆಂಪೋ ಟ್ರಾವೆಲರ್ ವಾಹನದಲ್ಲಿ ತೆಲಂಗಾಣ ಮೂಲದ ಅಯ್ಯಪ್ಪ ಮಾಲೆಧಾರಿಗಳು ಪ್ರಯಾಣಿಸುತ್ತಿದ್ದರು. ಅವರು ಉಡುಪಿಯಿಂದ ಧರ್ಮಸ್ಥಳದ ಕಡೆಗೆ ತೆರಳುತ್ತಿದ್ದರು ಎನ್ನಲಾಗಿದ್ದು, ಅದೃಷ್ಟವಶಾತ್ ವಾಹನದಲ್ಲಿದ್ದ ಭಕ್ತರೆಲ್ಲರೂ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.

ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಗಾಯಗೊಂಡ ಕಾರು ಚಾಲಕನನ್ನು ತಕ್ಷಣವೇ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಂಜು ಕವಿದ ಸಮಯದಲ್ಲಿ ಚಾಲಕರು ಹೆಚ್ಚಿನ ಜಾಗರೂಕತೆ ವಹಿಸಬೇಕೆಂದು ಪೊಲೀಸರು ಮಾಧ್ಯಮಗಳ ಮೂಲಕ ಮನವಿ ಮಾಡಿದ್ದಾರೆ.

ಮಣಿಪಾಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *