ವಿಟ್ಲ: ಸಂಕಷ್ಟದಲ್ಲಿರುವ ಅರ್ಹ ಫಲಾನುಭವಿಗಳಿಗೆ ಸಾಲ ನೀಡಿ, ಸಹಕರಿಸುವ ಕಾರ್ಯ ಸಹಕಾರಿ ಸಂಘಗಳಿಂದ ನಡೆಯಬೇಕು. ಇಂತಹ ಸಾಲ ಸಾಮಾಜಿಕ ಪ್ರಗತಿಗೂ ಕಾರಣವಾಗುತ್ತದೆ. ಕೃಷಿಕರಿಗೆ ಕಷ್ಟದಲ್ಲಿ ಸ್ಪಂದಿಸುವ ಕಾರ್ಯವನ್ನು ಟೌನ್ ಬ್ಯಾಂಕ್ ಮಾಡಿದೆ ಎಂದು ವಿಧಾನ ಪರಿಷತ್ತು ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಹೇಳಿದರು.
ವಿಟ್ಲ ಎಂಪೈರ್ ಮಾಲ್ ನಲ್ಲಿ ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ನೂತನ ವಿಟ್ಲ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.
ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ ಮಾತನಾಡಿ ದೇಶದಲ್ಲಿ 52 ರೀತಿಯ ಸಹಕಾರಿ ಸಂಸ್ಥೆಗಳಿದ್ದು, 8.5ಲಕ್ಷದ ಸಂಸ್ಥೆ ದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ. ಜಿಡಿಪಿಯಲ್ಲಿ ಶೇ.25 ರಷ್ಟು ಸಹಕಾರಿಯ ಕೊಡುಗೆಯಿದೆ. ರಾಷ್ಟ್ರೀಯ ನಿಯಮಾವಳಿಗಳನ್ನು ಡಿಸೆಂಬರ್ ನಲ್ಲಿ ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮೊಳಹಳ್ಳಿ ಶಿವರಾಯರ ಭಾವ ಚಿತ್ರ ಅನಾವರಣ ಮಾಡಲಾಯಿತು. ಗೋವರ್ಧನ ವಿಟ್ಲ ಅವರಿಗೆ ಪ್ರಥಮ ಠೇವಣಿ ಪತ್ರವನ್ನು ಹಸ್ತಾಂತರ ಮಾಡಲಾಯಿತು. 2025ನೇ ಸಾಲಿನ ಕ್ಯಾಲೆಂಡರಿನ ಬಿಡುಗಡೆ ನಡೆಯಿತು. ಕಟ್ಟಡ ಮಾಲೀಕ ಪೀಟರ್ ಫ್ರಾನ್ಸಿಸ್ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ನ ಅಧ್ಯಕ್ಷ ಎನ್. ಕಿಶೋರ್ ಒಕೊಳತ್ತಾಯ ವಹಿಸಿದ್ದರು.
ವಿಟ್ಲ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು, ಸಂಘದ ನಿರ್ದೇಶಕರಾದ ಸದಾಶಿವ ಪೈ, ಕಿರಣ್ ಕುಮಾರ್ ರೈ, ಚಂದ್ರಶೇಖರ ಗೌಡ ಕೆ. ನಾರಾಯಣ ಎ. ಬಿ., ವಿನೋದ್ ಕುಮಾರ್ ಜಿ., ಮಲ್ಲೇಶ್ ಕುಮಾರ್, ಜಯಂತಿ, ಹೇಮಾವತಿ, ವೃತ್ತಿಪರ ನಿರ್ದೇಶಕ ಅರವಿಂದ ಕೃಷ್ಣ ಬಿ. ಮತ್ತಿತರರು ಉಪಸ್ಥಿತರಿದ್ದರು.
ಅದ್ವಿಕಾ ಪ್ರಾರ್ಥಿಸಿದರು. ಉಪಾಧ್ಯಕ್ಷ ಕುಡ್ಗಿ ವಿಶ್ವಾಸ್ ಶೆಣೈ ಸ್ವಾಗತಿಸಿದರು. ನಿರ್ದೇಶಕ ಚಂದ್ರಶೇಖರ ರಾವ್ ಬಪ್ಪಳಿಗೆ ಪ್ರಸ್ತಾವನೆಗೈದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಶೇಖರ ಶೆಟ್ಟಿ ವಂದಿಸಿದರು. ವಿಟ್ಲ ಶಾಖಾ ವ್ಯವಸ್ಥಾಪಕ ಚೇತನ್ ಕಾರ್ಯಕ್ರಮ ನಿರೂಪಿಸಿದರು. ವಿಟ್ಲ ಶಾಖೆಯ ಪವನ್, ಉದಯ ಸಹಕರಿಸಿದರು.



