Breaking
21 Mar 2026, Sat

ಬೆಳ್ತಂಗಡಿಯಲ್ಲಿ ಪರಿಶಿಷ್ಟ ಜಾತಿ/ಪಂಗಡಗಳ ಕುಂದುಕೊರತೆಗಳ ಸಭೆ

ಬೆಳ್ತಂಗಡಿ: ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ/ಪಂಗಡಗಳ ಕುಂದುಕೊರತೆಗಳ ಸಭೆ ನಡೆಯಿತು.

ಈ ಸಭೆಯು ಪೋಲಿಸ್ ಉಪ ವಿಭಾಗದ ಡಿವೈಎಸ್ಪಿ ರೋಹಿಣಿ ಕೆ.ಸಿ ರವರ ಅಧ್ಯಕ್ಷತೆಯಲ್ಲಿ ಜರುಗಿತು.

ಈ ಸಭೆಯಲ್ಲಿ ಮಾತನಾಡಿದ ಡಿವೈಎಸ್ಪಿ ಅವರು ಅನಧಿಕೃತ ವಸತಿ ನಿಲಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ತಾಲೂಕಿನ ಅಲ್ಲಲ್ಲಿ ವಲಸೆ ಕಾರ್ಮಿಕರಿದ್ದು , ಅವರ ಬಗ್ಗೆ ಮಾಹಿತಿ ಸಂಗ್ರಹಿಸುವ ಬಗ್ಗೆ ಈ ಹಿಂದಿನ ಸಭೆಯಲ್ಲಿ ಹೇಳಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ಬೇಸರ ವ್ಯಕ್ತ ಪಡಿಸಿದ ಬಿ.ಕೆ ವಸಂತ್ , ವಲಸೆ ಕಾರ್ಮಿಕರು ಯಾವ ರಾಜ್ಯ , ದೇಶದವರು ಎಂದು ತಿಳಿಯಲು ಅವರ ಅಧಿಕೃತ ದಾಖಲೆಗಳನ್ನು ಸಂಗ್ರಹಿಸುವುದು ಅಗತ್ಯವಿದೆ ಎಂದರು. ಈಗಾಗಲೇ ರಾಜ್ಯದಲ್ಲಿ ವಿದೇಶಿಗರು ಅನಧಿಕೃತವಾಗಿ ವಾಸಿಸುವ ಬಗ್ಗೆ ಮಾಹಿತಿ ಬರುತ್ತಿದ್ದು , ಈ ಬಗ್ಗೆ ಪೋಲಿಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದರೆ ಉತ್ತಮ ಎಂದರು.

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶೇಖರ್ ಕುಕ್ಕೇಡಿ ಮಾತನಾಡಿ ಪರಿಶಿಷ್ಟ ಜಾತಿ /ಪಂಗಡಗಳ ಅನುದಾನ ಉಪಯೋಗಿಸುವ ಎಲ್ಲಾ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಸಭೆಗೆ ಹಾಜರಾಗಬೇಕು. ದಲಿತರ ಕುಂದುಕೊರತೆಗಳ ಸಭೆಗೆ ಅಧಿಕಾರಿಗಳು ಗೈರು ಹಾಜರಾಗಿ , ಸಿಬ್ಬಂದಿಗಳನ್ನು ಕಳುಹಿಸುತ್ತಿರುವುದು ಸರಿಯಲ್ಲ , ಇದು ಕೂಡ ದಲಿತ ದೌರ್ಜನ್ಯಕ್ಕೆ ಸಮ ಎಂದು ಹೇಳಿದರು. ಇದಕ್ಕೆ ಧ್ವನಿಗೂಡಿಸಿದ ಹಿರಿಯ ದಲಿತ ನಾಯಕ ಸಂಜೀವ ಆರ್ ಪರಿಶಿಷ್ಟ ಜಾತಿ/ಪಂಗಡಗಳ ಅನುದಾನ ವಿನಿಯೋಗ ಮಾಡದಿರುವುದು ಕೂಡ ದೌರ್ಜನ್ಯಕ್ಕೆ ಸಮ. ಅಂತಹ ಅಧಿಕಾರಿಗಳ ಮೇಲೆ ದಲಿತ ದೌರ್ಜನ್ಯ ತಡೆ ಕಾಯಿದೆಯಡಿ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಶಿರ್ಲಾಲು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪುಷ್ಪರಾಜ್ ಎಂ.ಕೆ ಮಾತನಾಡಿ ರಸ್ತೆಯ ಇಕ್ಕೆಲಗಳಲ್ಲಿ ಅಧಿಕೃತ ಮತ್ತು ಅನಧಿಕೃತವಾಗಿ ಪ್ಲಾಕ್ಸ್ ಬ್ಯಾನರ್ ಗಳನ್ನು ಅಳವಡಿಸಲಾಗುತ್ತಿದೆ , ಇದರಿಂದಾಗಿ ಹಲವು ಕಡೆಗಳಲ್ಲಿ ರಸ್ತೆ ಅಪಘಾತಗಳು ಸಂಭವಿಸಿವೆ. ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಗ್ರಾಮ ಪಂಚಾಯತಿಗಳಿಗೆ ಸೂಚಿಸಬೇಕು ಎಂದರು.

ನಲಿಕೆ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಶಾಂತಿಗೋಡು ಮಾತನಾಡಿ ಶಿರ್ಲಾಲು ಗ್ರಾಮದ ಬಾಬು ನಲ್ಕೆ ಎಂಬವರ ಪಟ್ಟಾ ಜಮೀನನ್ನು ಸ್ಥಳೀಯ ಮೇಲ್ಜಾತಿಯ ವ್ಯಕ್ತಿಯೊಬ್ಬ ಅತಿಕ್ರಮಿಸಿ , ಜಮೀನಿನ ಕೃಷಿ ನಾಶ ಮಾಡಿರುವ ಬಗ್ಗೆ ವೇಣೂರು ಪೋಲಿಸರು ನಿರ್ಲಕ್ಷ್ಯ ತೋರಿದ್ದಾರೆ. ಜಿಲ್ಲಾಧಿಕಾರಿ ರವರು ಜಿಲ್ಲಾ ಎಸ್ಪಿರವರಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಆದೇಶಿಸಿದರೂ ವೇಣೂರು ಪೋಲಿಸರು ಸಿವಿಲ್ ಸ್ವರೂಪದ ಪ್ರಕರಣ ಎಂದು ಹಿಂಬರಹ ನೀಡಿರುವುದು ಸರಿಯಲ್ಲ. ಅಧಿಕೃತ ದಾಖಲೆಗಳನ್ನು ಹೊಂದಿರುವ ಜಮೀನಿನಲ್ಲಿದ್ದ ಕೃಷಿ ನಾಶ ಮಾಡಿರುವುದು ದಲಿತ ದೌರ್ಜನ್ಯವಾಗಿದೆ. ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಒತ್ತಾಯಿಸಿದರು. ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಡಿವೈಎಸ್ಪಿ ವೇಣೂರು ಪಿಎಸ್ಐ ಗೆ ಸೂಚಿಸಿದರು.

ದಸಂಸ(ಅಂಬೇಡ್ಕರ್ ವಾದ) ತಾಲೂಕು ಸಂಚಾಲಕ ರಮೇಶ್ ಆರ್ ಮಾತನಾಡಿ ಈ ಹಿಂದೆ ಪ್ರಸನ್ನ ಕಾಲೇಜ್ ನಲ್ಲಿದ್ದ ದೈಹಿಕ ಶಿಕ್ಷಣ ಶಿಕ್ಷಕನೊರ್ವ ರಾಜ್ಯ , ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯಲ್ಲಿ ಸ್ಥಾನ ದೊರಕಿಸಿ ಕೊಡುತ್ತೇನೆ ಎಂದು ಆಮಿಷ ತೋರಿಸಿ ನಗರದ ಕೆಲ್ಲಗುತ್ತು , ರೆಂಕೆದಗುತ್ತು ಪರಿಸರದ ಹಲವು ದಲಿತ ಯುವಕರಿಂದ ತಲಾ 8,000 ರೂಪಾಯಿಗಳನ್ನು ಪಡೆದುಕೊಂಡು ಮೋಸ ಮಾಡಿದ್ದಾರೆ, ಈ ಬಗ್ಗೆ ಬೆಳ್ತಂಗಡಿ ಪೋಲಿಸ್ ಠಾಣೆಗೆ ದೂರು ನೀಡಿ ಎರಡು ತಿಂಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಲಿಕೆ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ ಸೇಸಪ್ಪ ಅಳದಂಗಡಿ ಮಾತನಾಡಿ ಅಳದಂಗಡಿಯಲ್ಲಿ ಪೋಲಿಸ್ ಹೊರ ಠಾಣೆ ತೆರೆಯಬೇಕು‌. ಅಳದಂಗಡಿ, ನಾರಾವಿ ಭಾಗದಲ್ಲಿ ಯಾವುದೇ ಘಟನೆ ನಡೆದರೂ 15-20 ಕಿಮೀ ದೂರದಲ್ಲಿರುವ ವೇಣೂರು ಪೋಲಿಸ್ ಠಾಣೆಯನ್ನು ಸಂಪರ್ಕಿಸಬೇಕಾಗಿದೆ ಎಂದರು.

ಕೃಷ್ಣಪ್ಪ ನಾರಾವಿ ಮಾತನಾಡಿ ಪೋಲಿಸ್ ಠಾಣೆ ಸೇರಿದಂತೆ ಸರ್ಕಾರಿ ಇಲಾಖೆಗಳಲ್ಲಿ ದಲಿತರ ಕೆಲಸಗಳನ್ನು ತಡವಾಗಿ ಮಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. ಉಪ ವಿಭಾಗದ ಎಲ್ಲಾ ಪೋಲಿಸ್ ಠಾಣೆಗಳಲ್ಲಿ ಸಾರ್ವಜನಿಕರ ಎಲ್ಲಾ ಕೆಲಸಗಳನ್ನು ತ್ವರಿತವಾಗಿ ನಡೆಸುವುದಲ್ಲದೆ , ಸಾರ್ವಜನಿಕರೊಂದಿಗೆ ಜನಸ್ನೇಹಿಯಾಗಿ ನಡೆದುಕೊಳ್ಳಲು ಸೂಚಿಸಿದರು.

ನಾಗರಿಕ ಸೇವಾ ಟ್ರಸ್ಟ್ ನ ಟ್ರಸ್ಟಿ ಬಾಬು ಎ ರವರು ಮಾತನಾಡಿ ಅನುದಾನಿತ ಶಾಲಾ ಕಾಲೇಜುಗಳಲ್ಲಿ ಸರ್ಕಾರದ ನಿಯಮಾವಳಿಗಳಂತೆ ಶಿಕ್ಷಣ ಸಂಸ್ಥೆಗಳಲ್ಲಿ ಒಬ್ಬನೇ ಒಬ್ಬ ದಲಿತ ಶಿಕ್ಷಕ/ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳದಿರುವುದು ದಲಿತ ದೌರ್ಜನ್ಯವಾಗಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಲು ಒತ್ತಾಯಿಸಿದರು. ಶೇಖರ್ ಲಾಯಿಲ ಮಾತನಾಡಿ ಜಿಲ್ಲೆಯಲ್ಲಿ ನಕಲಿ ದಾಖಲೆಗಳ ಮೂಲಕ ನಕಲಿ ಜಾತಿ ಪ್ರಮಾಣಪತ್ರಗಳನ್ನು ಪಡೆದು ಚುನಾವಣಾ ಸ್ಪರ್ಧೆ , ಉದ್ಯೋಗ ಪಡೆಯಲಾಗುತ್ತದೆ. ಈ ಬಗ್ಗೆ ಯಾವ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಸಿಬ್ಬಂದಿಯನ್ನು ಪ್ರಶ್ನಿಸಿದರು. ಧರ್ಮಸ್ಥಳ ಗ್ರಾಮ ಪಂಚಾಯತ್ ಸದಸ್ಯನೊರ್ವ ನಕಲಿ ದಾಖಲೆಗಳನ್ನು ನೀಡಿ ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದುಕೊಂಡ ಬಗ್ಗೆ 2000 ಇಸವಿಯಲ್ಲಿ ದೂರು ನೀಡಿದರೂ ಇಂದಿನ ತನಕವೂ ತನಿಖೆ ನಡೆಸದ ಬಗ್ಗೆ ಸಿಬ್ಬಂದಿಯನ್ನು ಪ್ರಶ್ನಿಸಿದರು. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಲ್ಲಿ ಪಿಎಸ್ಐ , ಇನ್ಸ್‌ಪೆಕ್ಟರ್ , ಡಿವೈಎಸ್ಪಿ ಹುದ್ದೆಗಳು ಸೇರಿದಂತೆ ಬಹುತೇಕ ಹುದ್ದೆಗಳು ಖಾಲಿಯಿದೆ. ಎಸ್ಪಿ ರವರು ಎಸ್ಐಟಿಗೆ ನೇಮಕಗೊಂಡು ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇರುವ ಸಿಬ್ಬಂದಿಗಳು ನಾಲ್ಕು ಜಿಲ್ಲೆಗಳ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ ಎಂದರು. ಸಭೆಗೆ ಯಾವುದೇ ದಾಖಲೆಗಳಿಲ್ಲದೆ ಕೈ ಬೀಸಿಕೊಂಡು ಬಂದಿರುವ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಆಗ ಮಧ್ಯೆ ಪ್ರವೇಶಿಸಿದ ಡಿವೈಎಸ್ಪಿ ಮುಂದಿನ ಸಭೆಗೆ ಸೂಕ್ತ ದಾಖಲೆಗಳೊಂದಿಗೆ ಸಭೆಗೆ ಬರಲು ಸೂಚಿಸಿದರು.

ಈ ವೇಳೆ ತಾಲೂಕಿನಲ್ಲಿ ಕಾನೂನು ಬಾಹಿರವಾಗಿ ಮತ್ತು ಅನಧಿಕೃತವಾಗಿ ಮನೆಗಳಲ್ಲಿ ವಸತಿ ನಿಲಯಗಳನ್ನು ನಡೆಸುತ್ತಿದ್ದು , ಇಲ್ಲಿ ಸರ್ಕಾರದ ನಿಯಮಾವಳಿಗಳನ್ನು ಪಾಲಿಸಲಾಗುತ್ತಿದೆಯೇ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಮುಖಂಡ ಬಿ.ಕೆ ವಸಂತ ಪ್ರಶ್ನಿಸಿದರು.

ವೇದಿಕೆಯಲ್ಲಿ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ರವಿ ಬಿ‌.ಎಸ್ , ಉಪ್ಪಿನಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ನಾಗರಾಜ್ ಉಪಸ್ಥಿತರಿದ್ದರು‌.

ಸಭೆಯಲ್ಲಿ ಬೆಳ್ತಂಗಡಿ ಪೋಲಿಸ್ ಉಪ ವಿಭಾಗದ ಪೋಲಿಸ್ ಠಾಣೆಗಳ ಪಿಎಸ್ಐ ಗಳು, ದಲಿತ ಮುಖಂಡರಾದ ಸೇಸಪ್ಪ ನೆಕ್ಕಿಲು , ಶ್ರೀನಿವಾಸ್ ಉಜಿರೆ , ಸದಾನಂದ ನಾಲ್ಕೂರು , ಪ್ರಭಾಕರ್ ನಾಯ್ಕ್ , ದಯಾನಂದ ಇಂದಬೆಟ್ಟು ಉಪಸ್ಥಿತರಿದ್ದರು. ಡಿವೈಎಸ್ಪಿ ಕಛೇರಿಯ ಎಎಸ್ಐ ಲಾರೆನ್ಸ್‌ ಹಿಂದಿನ ಸಭೆಯ ವರದಿ ಮಂಡಿಸಿದರು. ಹೆಡ್ ಕಾನ್ಸ್‌ಟೇಬಲ್ ಪ್ರವೀಣ್ ಎಂ ಸಹಕರಿಸಿದರು. ಹೆಡ್ ಕಾನ್ಸ್‌ಟೇಬಲ್ ಮನೋಹರ್ ನಿರೂಪಿಸಿ , ಧನ್ಯವಾದವಿತ್ತರು.

Leave a Reply

Your email address will not be published. Required fields are marked *