ಕಡಬ: ವ್ಯವಹಾರದಲ್ಲಿ ವಂಚಿಸಿ ಬಾರ್ ಸಿಬ್ಬಂದಿಯೋರ್ವ ನಗದನ್ನು ಕಳವು ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.
ಪರಾರಿಯಾಗಿರುವ ವ್ಯಕ್ತಿಯನ್ನು ಹುಂಚಪ್ಪಡಿ ನಿವಾಸಿ ಹರ್ಷಿತ್ ಬಿ.ಕೆ. ಎಂದು ಗುರುತಿಸಲಾಗಿದೆ.

ಹರ್ಷಿತ್ ಬಿ.ಕೆ. ಅವರು ಸುಮಾರು 7 ವರ್ಷಗಳಿಂದ ನೆಟ್ಟಣದಲ್ಲಿರುವ ಸ್ಟೀಫನ್ ತಾಯಿಯ ಬಾರ್ ವೊಂದರಲ್ಲಿ ಹಣಕಾಸಿನ ವ್ಯವಹಾರ, ಸ್ಟಾಕ್ ನಿರ್ವಹಣೆ ಹಾಗೂ ಮೇಲ್ವಿಚಾರಣೆ ಜವಾಬ್ದಾರಿ ವಹಿಸಿಕೊಂಡಿದ್ದರು.
ಡಿ.21ರಂದು ಸ್ಟೀಫನ್ ಅವರು ಬಾರ್ ನ ವಹಿವಾಟು ಬಗ್ಗೆ ಪರಿಶೀಲಿಸಿದಾಗ ವ್ಯತ್ಯಯ ಕಂಡುಬಂದಿದ್ದು, ಈ ಬಗ್ಗೆ ಹರ್ಷಿತ್ ಬಳಿ ವಿಚಾರಿಸಿದಾಗ ಮರುದಿನ ಸರಿಯಾಗಲಿದೆ ಹಾಗೂ ವ್ಯಾಪಾರದ ನಗದನ್ನು ಬ್ಯಾಂಕಿನಲ್ಲಿ ಜಮೆ ಮಾಡುವುದಾಗಿ ತಿಳಿಸಿದ್ದರು. ಆದರೆ ಮರುದಿನ ಹಣ ಜಮೆಯಾಗದಿರುವುದನ್ನು ತಿಳಿದ ಸ್ಟೀಫನ್ ಅವರು ಹರ್ಷಿತ್ ನನ್ನು ವಿಚಾರಿಸಲು ಆತನ ಕೊಠಡಿಗೆ ಹೋದಾಗ ಆತನು ನಾಪತ್ತೆಯಾಗಿದ್ದು ಬೆಳಕಿಗೆ ಬಂದಿದೆ.

ವಿಚಾರಣೆ ವೇಳೆ ಸುಮಾರು ರೂ.6,57,104 ಮೌಲ್ಯದ ಮದ್ಯವನ್ನು ಈ ಹಿಂದೆ ಆರೋಪಿ ಮಾರಾಟ ಮಾಡಿ, ಅದರ ಮೊತ್ತವನ್ನು ಬ್ಯಾಂಕಿಗೆ ಜಮೆ ಮಾಡದೇ ವಂಚಿಸಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಬಿಳಿನೆಲೆ ಗ್ರಾಮದ ವಿಶಾಲ್ ಸ್ಟೀಫನ್ ಅವರು ಕಡಬ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.




