ಕಾರ್ಕಳ: ಮಹಿಳೆಯರು ಮತ್ತು ಮಕ್ಕಳಿಗೆ ನ್ಯಾಯ ಒದಗಿಸುವ ಜವಾಬ್ದಾರಿ ಹೊಂದಿರುವ ಕಾರ್ಕಳ ಮಹಿಳಾ ಸಾಂತ್ವನ ಕೇಂದ್ರವು ಏಕಪಕ್ಷೀಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಮಾಜಸೇವಕರ ಧ್ವನಿಯನ್ನು ಅಡಗಿಸುವ ಪ್ರಯತ್ನ ಮಾಡುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತೆ ರಮಿತಾ ಸೂರ್ಯವಂಶಿ ಆರೋಪಿಸಿದ್ದಾರೆ.

ಈ ಸಂಬಂಧ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಅಧಿಕೃತ ದೂರು ಸಲ್ಲಿಸಿದ್ದು, ದೂರುದಾರರು ಕೇಂದ್ರಕ್ಕೆ ಭೇಟಿ ನೀಡಿದಾಗ ಕಾನೂನು ಪ್ರಕ್ರಿಯೆಯಂತೆ ನೋಟಿಸ್ ನೀಡದೇ ತಕ್ಷಣ ಕಚೇರಿಗೆ ಬರಲು ಒತ್ತಾಯಿಸುವುದು ಹಾಗೂ ಬರದಿದ್ದರೆ ದೂರುದಾರರ ಪರವಾಗಿ ಸ್ವತಃ ಸುಳ್ಳು ದೂರನ್ನು ರಚಿಸುವ ಪ್ರಕ್ರಿಯೆಯನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ರಮಿತಾ ಸೂರ್ಯವಂಶಿ ಅವರ ಪ್ರಕಾರ, ಮಹಿಳಾ ಒಕ್ಕೂಟದ ಅಧ್ಯಕ್ಷರು ಎಲ್ಲಾ ವಿಷಯಗಳಲ್ಲೂ ಏಕಪಕ್ಷೀಯ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದು, ನಿಜವಾದ ನೊಂದವರಿಗೆ ನ್ಯಾಯ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕ ವಲಯದಲ್ಲಿಯೂ ಈ ಅಧ್ಯಕ್ಷರ ಕುರಿತು ಹಲವಾರು ಅಸಮಾಧಾನ ಮತ್ತು ದೂರುಗಳು ಕೇಳಿಬರುತ್ತಿವೆ ಎಂದು ಅವರು ತಿಳಿಸಿದ್ದಾರೆ. ಈ ಎಲ್ಲಾ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು, ಮಹಿಳಾ ಸಾಂತ್ವನ ಕೇಂದ್ರದ ಮಹಿಳಾ ಒಕ್ಕೂಟದ ಅಧ್ಯಕ್ಷರ ಬದಲಾವಣೆಗೆ ಸಂಬಂಧಿಸಿದ ಮನವಿಯನ್ನು ಇಲಾಖಾ ಅಧಿಕಾರಿಗಳಿಗೆ ಈಗಾಗಲೇ ಸಲ್ಲಿಸಲಾಗಿದೆ ಎಂದು ರಮಿತಾ ತಿಳಿಸಿದ್ದಾರೆ.

ದೂರಿನ ಮೇಲೂ ಯಾವುದೇ ಕ್ರಮ ಕೈಗೊಳ್ಳದೆ ಇದೇ ಅಧ್ಯಕ್ಷರನ್ನು ಮುಂದುವರೆಸಿದರೆ ಮಹಿಳೆಯರು ಒಟ್ಟುಗೂಡಿ ಪ್ರತಿಭಟನೆ ನಡೆಸಲಿದ್ದೇವೆ ಹಾಗೂ ಕಾನೂನುಬದ್ಧ ಕ್ರಮಕ್ಕಾಗಿ ಆಗ್ರಹಿಸುತ್ತೇವೆ,” ಎಂದು ರಮಿತಾ ಸೂರ್ಯವಂಶಿ ತಮ್ಮ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.



