ಕಾಸರಗೋಡು : ಜಗದ್ಗುರು ಶಂಕರಾಚಾರ್ಯ ತೋಟಕಾಚಾರ್ಯ ಶ್ರೀ ಎಡನೀರು ಮಠಾಧೀಶ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ವಾಹನದ ಮೇಲೆ ದುಷ್ಕರ್ಮಿಗಳು ಬೋವಿಕಾನದ ಬಾವಿಕೆರೆ ಎಂಬಲ್ಲಿ ಆಕ್ರಮಣ ನಡೆಸಿದ ಹೀನಕೃತ್ಯವನ್ನು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ತೀವ್ರವಾಗಿ ಖಂಡಿಸಿದ್ದಾರೆ.
ಇಂತಹ ದುಷ್ಕೃತ್ಯಗಳು ನಡೆಯದಂತೆ ಸರಕಾರ ಕಾಳಜಿ ವಹಿಸಬೇಕೆಂದೂ, ತಪ್ಪಿತಸ್ಥ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ತಕ್ಷಣ ಕ್ರಮಕೈಗೂಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಸಾರ್ವಜನಿಕ ಕಾರ್ಯಕ್ರಮದಿಂದ ಹಿಂದಿರುಗುವಾಗ ಬೋವಿಕಾನ – ಇರಿಯಣ್ಣಿ ಮಾರ್ಗ ಮಧ್ಯೆ ವಾಹನವನ್ನು ತಡೆದ ಪುಂಡರ ತಂಡವೊಂದು ತಗಾದೆ ಎಬ್ಬಿಸಿತ್ತು. ಇದೇ ದಾರಿಯಲ್ಲಿ ಕಾರ್ಯಕ್ರಮ ಮುಗಿಸಿ ಮರಳಿ ಬರುವಾಗ ಇರಿಯಣ್ಣಿಯಿಂದಲೇ ಹಿಂಬಾಲಿಸಿದ ಬಂದವರ ಪೈಕಿ ಬಾವಿಕೆರೆ ಎಂಬಲ್ಲಿ ದೊಣ್ಣೆಯಿಂದ ಕಾರಿನ ಗಾಜಿಗೆ ಹೊಡೆದರೆಂದೂ, ಕಾರಿನ ಗಾಜಿಗೆ ಹಾನಿಯಾಗಿದೆಯೆಂದೂ ತಿಳಿದುಬಂದಿದೆ. ಈ ಸಂದರ್ಭ ಸ್ವಾಮೀಜಿಯವರು ಕಾರು ನಿಲ್ಲಿಸದೇ ಶಾಂತರಾಗಿ ಮುಂದುವರಿದಿದ್ದಾರೆ.