ಪುತ್ತೂರು : ಕೊಂಬೆಟ್ಟು ಸರ್ಕಾರಿ ಪದವಿಪೂರ್ವ ಕಾಲೇಜು ಪುತ್ತೂರಿನ ನ ಕ್ರೀಡಾಂಗಣದಲ್ಲಿ ಅಶೋಕ ಜನ-ಮನ 2024 -ವಸ್ತ್ರ ವಿತರಣೆ, ಸಹಭೋಜನ, ಗೂಡುದೀಪ ಸ್ಪರ್ಧೆ ಕಾರ್ಯಕ್ರಮ ನಡೆಯಿತು.
ಸಮಾರಂಭವನ್ನು ಉದ್ಘಾಟಿಸಿದ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ ಪಕ್ಷಾತೀತವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂತೋಷ ನನಗಾಗಿದೆ. ನಾನು ಕೇವಲ ಭಾವನಾತ್ಮಕವಾಗಿ ಮಾತನಾಡಿ ಜನರನ್ನು ಸೆಳೆಯುವುದಿಲ್ಲ. ಪ್ರಾಮಾಣಿಕ ಕೆಲಸದ ಮೂಲಕ ಮಾತನಾಡುತ್ತೇನೆ. ಕರಾವಳಿಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರತ್ಯೇಕ ಉದ್ಯೋಗ ನೀತಿ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಧರ್ಮ ಮತ್ತು ಸೇವಾ ಕಾರ್ಯದ ಮೂಲಕ ಅಶೋಕ್ ಕುಮಾರ್ ರೈ ಜನಮನದಲ್ಲಿ ಉಳಿದಿದ್ದಾರೆ. ಬದುಕಿನಲ್ಲಿ ಬಂದ ಅವಕಾಶವನ್ನು ರೈಯವರು ಸದ್ವಿನಿಯೋಗಿಸಿಕೊಂಡಿದ್ದಾರೆ. ಸದಾ ಪುತ್ತೂರು ಅಭಿವೃದ್ಧಿಯ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸುತ್ತಾರೆ. ವರ್ಷಕ್ಕೊಂದು ಬೃಹತ್ ಯೋಜನೆ ಅನುಷ್ಠಾನ ಮಾಡುವ ಬಗ್ಗೆ ಸಲಹೆ ನೀಡಿದ್ದೇನೆ. ಜನರ ನಂಬಿಕೆ, ಆಶೋತ್ತರಗಳಿಗೆ ರೈ ಸ್ಪಂದಿಸುತ್ತಾರೆ. ಅಶೋಕ್ ಕುಮಾರ್ ರೈಯವರ ಬೇಡಿಕೆಗಳನ್ನು ಈಡೇರಿಸಲು ಖಂಡಿತಾ ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.
ಮಾಯಿದೆ ದೇವುಸ್ ಚರ್ಚ್ ಧರ್ಮಗುರು ಲಾರೆನ್ಸ್ ಮಸ್ಕರೇನ್ಹಸ್ ಮಾತನಾಡಿ ಜೀವನ ದೇವರು ಕೊಟ್ಟ ಕೊಡುಗೆ. ಪರರಿಗಾಗಿ ಬದುಕಿದ್ದಾಗ ನಿಜವಾದ ಸಂತೃಪ್ತತೆ ಪ್ರಾಪ್ತಿಯಾಗುತ್ತದೆ. ಅಶೋಕ್ ಕುಮಾರ್ ರೈ ದೀಪದಂತೆ ಲಕ್ಷಾಂತರ ಮಂದಿಗೆ ಸೇವೆ ಮಾಡುತ್ತಿದ್ದಾರೆ. ಶಾಸಕರಿಗೆ ಇರುವ ಬಡವರ ಕಾಳಜಿ, ಪುತ್ತೂರು ಪ್ರಗತಿಯ ಕನಸು ಅಪಾರವಾಗಿದೆ.
ಧರ್ಮಗುರು ಎಂ.ಬಿ.ದಾರಿಮಿ ಮಾತನಾಡಿ ಭಾರತೀಯ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಕಾರ್ಯವಾಗುತ್ತಿದೆ. ವಸ್ತ್ರ ದಾನದ ಮೂಲಕ ಮಾತೃ ಸಂಸ್ಕೃತಿಗೆ ಗೌರವ ನೀಡಿದ್ದಾರೆ.
ಸೌಹಾರ್ದತೆಯಿಂದ ಮಾತ್ರ ಭಾರತಕ್ಕೆ ಭವಿಷ್ಯವಿದೆ ಎಂದರು.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ 12 ವರ್ಷಗಳಿಂದ ಈ ಸೇವಾ ಕಾರ್ಯ ನಡೆಯುತ್ತಿದ್ದು, ದೇವರು ಶಕ್ತಿ ನೀಡುವ ತನಕ ಜನರ ಸೇವೆ ಮಾಡುತ್ತೇನೆ. ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ನನ್ನ ಬಹುದೊಡ್ಡ ಕನಸಾಗಿದೆ. ಈಗಾಗಲೇ ಸುಸಜ್ಜಿತ ಕ್ರೀಡಾಂಗಣಕ್ಕೆ 20 ಎಕರೆ ಭೂಮಿ ಗುರುತಿಸಿದ್ದು, 8.5 ಕೋಟಿ ಅನುದಾನದ ಭರವಸೆ ಸಿಕ್ಕಿದೆ. 10 ಲಕ್ಷ ರೂ. ಬಿಡುಗಡೆಯಾಗಿದೆ. ಪುತ್ತೂರು ಸರ್ವತೋಮುಖ ಅಭಿವೃದ್ಧಿ ನನ್ನ ಧ್ಯೇಯವಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ ಆರ್.ಪೂಜಾರಿ, ಮಿಥುನ್ ರೈ, ರಕ್ಷಿತ್ ಶಿವರಾಂ, ಇನಾಯತ್ ಅಲಿ, ಎಂ.ಎಸ್.ಮಹಮ್ಮದ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭಾರತ್ ಮುಂಡೋಡಿ, ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಕೃಷ್ಣ ಪ್ರಸಾದ್ ಆಳ್ವ, ಕಾವು ಹೇಮನಾಥ ಶೆಟ್ಟಿ, ರಘು ಬೆಳ್ಳಿಪ್ಪಾಡಿ, ಕೃಷ್ಣಪ್ಪ ಸುಳ್ಯ, ಅಶೋಕ್ ಕುಮಾರ್ ರೈ ತಾಯಿ ಗಿರಿಜಾ ಎಸ್.ರೈ, ಪತ್ನಿ ಸುಮಾ ಅಶೋಕ್ ಕುಮಾರ್ ರೈ ಉಪಸ್ಥಿತರಿದ್ದರು.
ರೈ ಎಸ್ಟೇಟ್ & ಚಾರಿಟೇಬಲ್ ಕಾರ್ಯದರ್ಶಿ ಸುದೇಶ್ ರೈ ಸ್ವಾಗತಿಸಿದರು. ಸಮಾರಂಭದ ಸ್ವಾಗತ ಸಮಿತಿಯ ನಿರಂಜನ ರೈ ಮಠಂತಬೆಟ್ಟು ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ 20 ಮಂದಿ ಗ್ರಾಮೀಣ ಸಾಧಕರುಗಳನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಸಂಗೀತ ಗೀತ ಗಾಯನ ನಡೆಯಿತು.