ಕಾಸರಗೋಡು: ಗುಡ್ಡದ ಮೇಲಿನ ರಸ್ತೆಯೊಂದರಲ್ಲಿ ನಿಲ್ಲಿಸಿದ್ದ ಜೀಪೊಂದು ಹಿಂದಕ್ಕೆ ಉರುಳಿ ಸಂಭವಿಸಿದ ಅಪಘಾತದಲ್ಲಿ ತಾಯಿ ಮತ್ತು ಮಗಳು ಗಂಭೀರವಾಗಿ ಗಾಯಗೊಂಡ ಘಟನೆ ಕಾಸರಗೋಡಿನ ಉಪ್ಪಳದಲ್ಲಿ ನಡೆದಿದೆ.
ಬೇಕೂರಿನ ಜಯಂತಿ ಭಂಡಾರಿ(74)ಮತ್ತು ಅವರ ಪುತ್ರಿ ಸುಮಲತಾ ಶೆಟ್ಟಿ(47) ಗಾಯಗೊಂಡವರು.

ಗುಡ್ಡದ ಮೇಲೆ ನಿಲ್ಲಿಸಿದ್ದ ವಾಹನ ಹಿಂದಕ್ಕೆ ಚಲಿಸಿದ ಪರಿಣಾಮ ಮನೆಯ ಅಂಗಳದಲ್ಲಿ ಒಣ ಅಡಿಕೆ ಸಂಗ್ರಹಿಸುತ್ತಿದ್ದ ತಾಯಿ ಮತ್ತು ಮಗಳಿಗೆ ಡಿಕ್ಕಿ ಹೊಡೆದಿದೆ. ಬಳಿಕ ಮುಂದೆ ಸಾಗಿದ ಜೀಪು ತೋಟದೊಳಗೆ ಚಲಿಸಿ ಹೊಂಡಕ್ಕೆ ಉರುಳಿದೆ. ಸದ್ಯ ಘಟನೆಯಲ್ಲಿ ಗಂಭೀರ ಗಾಯಗೊಂಡ ಇಬ್ಬರನ್ನೂ ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.





