ಉಪ್ಪಿನಂಗಡಿ: ವಿದ್ಯಾರ್ಥಿನಿಯೋರ್ವಳು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಪ್ಪಿನಂಗಡಿ ಸಮೀಪದ ಇಳಂತಿಲ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ಇಳಂತಿಲ ಗ್ರಾಮದ ಪಾರಡ್ಕ ನಿವಾಸಿ ಹರ್ಷಿತಾ (15) ಎಂದು ಗುರುತಿಸಲಾಗಿದೆ.

ಹರ್ಷಿತಾ ಉಪ್ಪಿನಂಗಡಿ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ನವೆಂಬರ್ 4ರಂದು ತಲೆನೋವು ಇದೆ ಎಂದು ಹೇಳಿ ಶಾಲೆಗೆ ತೆರಳದೇ ಮನೆಯಲ್ಲಿಯೇ ಇದ್ದಳು ಈ ವೇಳೆ ಹುಲ್ಲಿಗೆ ಸಿಂಪಡಿಸುವ ಕೀಟನಾಶಕವನ್ನು ಸೇವಿಸಿ ಅಸ್ವಸ್ಥಗೊಂಡಿದ್ದಳು.

ಈ ವಿಷಯ ತಿಳಿದ ತಕ್ಷಣ ಕೂಲಿ ಕೆಲಸಕ್ಕೆ ತೆರಳಿದ್ದ ತಾಯಿ ಗೀತಾ ಮನೆಗೆ ಬಂದು ಪ್ರಾಥಮಿಕ ಚಿಕಿತ್ಸೆಗೆ ಪುತ್ತೂರು ಆಸ್ಪತ್ರೆಗೆ ಕರೆದೊಯ್ದರು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆದರೆ ಚಿಕಿತ್ಸೆ ಫಲಕಾರಿಯಾಗದೆ ನವೆಂಬರ್ 12ರಂದು ಮೃತಪಟ್ಟಿದ್ದಾಳೆ.

ಮೃತಳ ತಂದೆ ನೀಡಿರುವ ದೂರಿನಲ್ಲಿ ಕಡಬದ ರಾಜೇಶ್ ಎಂಬಾತ ಫೋನ್ ಮೂಲಕ ಕಿರುಕುಳ ನೀಡುತ್ತಿದ್ದನೆಂಬ ಶಂಕೆ ವ್ಯಕ್ತವಾಗಿದೆ. ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


