ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವತಿಯಿಂದ “ಭ್ರಷ್ಟಾಚಾರ ವಿರೋಧಿಸಿ, ಮಂಗಳೂರು ವಿವಿ ಉಳಿಸಿ ಎಂಬ” ಬೃಹತ್ ಹೋರಾಟವು ನಗರದ ಕ್ಲಾಕ್ ಟವರ್ ಮುಂಭಾಗ ನ.11 ರಂದು ನಡೆಯಿತು.

ಈ ವೇಳೆ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವಿಭಾಗ ಸಂಚಾಲಕರಾದ ಸುವಿತ್ ಶೆಟ್ಟಿ ಅವರು ಮಂಗಳೂರು ವಿಶ್ವವಿದ್ಯಾನಿಲಯವು ದಶಕದ ಹಿಂದೆ ರಾಜ್ಯದ ಅತ್ಯಂತ ಸುಭಿಕ್ಷ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ವಿಶ್ವವಿದ್ಯಾನಿಲಯದ ಸ್ಥಿತಿ ಅತ್ಯಂತ ಶೋಚನೀಯವಾಗಿದೆ ಎಂದು ಹೇಳುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ.

ಸಾಮಾನ್ಯವಾಗಿ ಯಾವುದೇ ಸಂಸ್ಥೆ ಕಾಲಕ್ರಮೇಣ ಅಭಿವೃದ್ಧಿಯ ಹಾದಿಯಲ್ಲಿ ಸಾಗುವುದು ಸಹಜ. ಆದರೆ ಮಂಗಳೂರು ವಿಶ್ವವಿದ್ಯಾನಿಲಯ ಮಾತ್ರ ದಿನದಿಂದ ದಿನಕ್ಕೆ ಅವನತಿಯತ್ತ ಸಾಗುತ್ತಿದೆ. ಸುಮಾರು 30 ಕ್ಕೂ ಹೆಚ್ಚು ಸ್ನಾತಕೋತ್ತರ ವಿಭಾಗಗಳು, ನಾಲ್ಕು-ಐದು ಘಟಕ ಕಾಲೇಜುಗಳು, ಅನೇಕ ಅಧ್ಯಯನ ಕೇಂದ್ರಗಳು ಹಾಗೂ ಪೀಠಗಳು ಇದ್ದರೂ ವಿಶ್ವವಿದ್ಯಾನಿಲಯದ ಅಭಿವೃದ್ಧಿ ಕುಂಠಿತವಾಗಿದೆ. ಮಾತ್ರವಲ್ಲ ಮಂಗಳೂರು ವಿವಿಯಲ್ಲಿ ಅಧಿಕಾರಿಗಳು 7 ಕೋಟಿ ನುಂಗಿದ್ದಾರೆ ಎಂದು ಗಂಭೀರ ಆರೋಪವನ್ನು ಮಾಡಿದರು.

ಪ್ರತಿಭಟನೆಯಲ್ಲಿ ತಾಲೂಕು ಸಂಚಾಲಕರಾದ ಮೋನಿಶ್ ತುಮಿನಾಡು, ಮಹಾನಗರ ಕಾರ್ಯದರ್ಶಿ ಶ್ರೀಲಕ್ಷ್ಮಿ ಶೆಟ್ಟಿ, ವಲಯ ಕಾರ್ಯದರ್ಶಿ ಹರ್ಷಿತ್, ಸಹಕಾರ್ಯದರ್ಶಿ ಅಶ್ಲೇಷ ಸೇರಿದಂತರ 300 ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.




