Breaking
23 Jun 2026, Tue

ಉಪ್ಪಿನಂಗಡಿಯಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ; ಇಬ್ಬರು ಪೊಲೀಸ್‌ ವಶಕ್ಕೆ

ಉಪ್ಪಿನಂಗಡಿ: ಅನಾರೋಗ್ಯದಿಂದ ಮನೆಯಲ್ಲಿದ್ದ ಸಹಪಾಠಿಯ ಆರೋಗ್ಯ ವಿಚಾರಿಸಲು ತೆರಳಿದ್ದ ವಿದ್ಯಾರ್ಥಿಗಳ ತಂಡದ ಮೇಲೆ, ಅದೇ ಸಮುದಾಯದ ಯುವಕರ ಗುಂಪೊಂದು ಹಲ್ಲೆ ನಡೆಸಿದ ಘಟನೆ ಉಪ್ಪಿನಂಗಡಿಯ ಪೆರಿಯಡ್ಕದಲ್ಲಿ ನ.06ರಂದು ನಡೆದಿದೆ.

ಉಪ್ಪಿನಂಗಡಿಯ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಪೆರಿಯಡ್ಕ ಮೂಲದ ವಿದ್ಯಾರ್ಥಿ ಕ್ರೀಡಾಕೂಟದಲ್ಲಿ ಭಾಗವಹಿಸಿದ ವೇಳೆ ಕಾಲಿಗೆ ಗಾಯಗೊಂಡು ಮನೆಯಲ್ಲೇ ವಿಶ್ರಾಂತಿಯಲ್ಲಿದ್ದರು. ಈ ಹಿನ್ನೆಲೆ, ನ.6ರಂದು ಮಧ್ಯಾಹ್ನ 10 ಮಂದಿ ಸಹಪಾಠಿಗಳು ಆತನ ಮನೆಗೆ ಆರೋಗ್ಯ ವಿಚಾರಿಸಲು ತೆರಳಿದ್ದರು.

ಈ ತಂಡದಲ್ಲಿ ಇಬ್ಬರು ಒಂದು ಧರ್ಮಕ್ಕೆ ಸೇರಿದ್ದು, ನಾಲ್ವರು ವಿದ್ಯಾರ್ಥಿಗಳು ಹಾಗೂ ನಾಲ್ವರು ವಿದ್ಯಾರ್ಥಿನಿಯರು ಮತ್ತೊಂದು ಧರ್ಮಕ್ಕೆ ಸೇರಿದ್ದರು. ಸಹಪಾಠಿಯನ್ನು ಭೇಟಿಯಾಗಿ ವಾಪಸ್‌ ಬರುವಾಗ, ಅನ್ಯಕೋಮಿನ ಯುವಕರ ಗುಂಪೊಂದು ವಿದ್ಯಾರ್ಥಿಗಳ ದಾರಿಗೆ ಅಡ್ಡಗಟ್ಟಿ, “ಬುರ್ಖಾಧಾರಿ ವಿದ್ಯಾರ್ಥಿನಿಯರೊಂದಿಗೆ ಈ ಭಾಗದಲ್ಲಿ ಸುತ್ತಾಡುತ್ತಿರುವುದೇ?” ಎಂದು ಪ್ರಶ್ನಿಸಿ, ಶಾಲಿಮ್ ಎಂಬ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದೆ ಎಂದು ತಿಳಿದುಬಂದಿದೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಉಪ್ಪಿನಂಗಡಿ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ, ನೈತಿಕ ಪೊಲೀಸ್‌ಗಿರಿ ಹಾಗೂ ಹಲ್ಲೆ ಪ್ರಕರಣದ ಆರೋಪಿಗಳಾದ ಪೆರಿಯಡ್ಕ ನಿವಾಸಿಗಳಾದ ಮಹಮ್ಮದ್ ಮುಸ್ತಾಫ (40) ಮತ್ತು ಮುಸ್ತಾಫ (31) ಎಂಬವರನ್ನು ಬಂಧಿಸಿದ್ದಾರೆ.

ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *