ಭಟ್ಕಳ: ಖಾಸಗಿ ಬಸ್ವೊಂದರಲ್ಲಿ ಸ್ವೀಟ್ ಬಾಕ್ಸ್ ಮಾದರಿಯಲ್ಲಿ ಸಾಗಾಟ ಮಾಡಲಾಗುತ್ತಿದ್ದ 32 ಚಿನ್ನದ ಬಳೆ, 50 ಲಕ್ಷ ರೂಪಾಯಿ ನಗದನ್ನು ಭಟ್ಕಳ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮುಂಬೈನಲ್ಲಿ ಬಸ್ ಚಾಲಕನ ಕೈಗೆ ಅನಾಮಿಕ ವ್ಯಕ್ತಿಯೊಬ್ಬ ಸೂಟ್ಕೇಸ್ ನೀಡಿದ್ದಾನೆ ಎನ್ನಲಾಗಿದೆ. ಮಂಗಳೂರು ಬಸ್ ನಿಲ್ದಾಣದಲ್ಲಿ ಸೂಟ್ ಕೇಸ್ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದ. ಬಸ್ ಸಂಖ್ಯೆ ಹೇಳುತ್ತೇನೆ, ನಮ್ಮವರು ಬಂದು ಪಡೆಯುತ್ತಾರೆ. ಇರ್ಫಾನ್ ಎಂಬುವವರಿಗೆ ಸೂಟ್ಕೇಸ್ ಕೊಡುವಂತೆ ಹೇಳಿದ್ದ.

ಸಂಶಯಾಸ್ಪದ ಹಿನ್ನೆಲೆ ಭಟ್ಕಳದಲ್ಲಿ ಪೊಲೀಸರು ಬಸ್ ಅನ್ನು ಸರ್ಚ್ ಮಾಡಿದಾಗ ಪೊಲೀಸರ ಕಣ್ಣಿಗೆ ಸೂಟ್ಕೇಸ್ ನಲ್ಲಿ ಸ್ವೀಟ್ ಬಾಕ್ಸ್ ಮಾದರಿಯಲ್ಲಿ ಕಂಡಿದ್ದು, ಅದನ್ನು ಓಪನ್ ಮಾಡಿದಾಗ ಹಣ, ಒಡವೆ ಪತ್ತೆ ಆಗಿವೆ. ಸದ್ಯ ಬಸ್ ಚಾಲಕನಿಂದ ನಗದು ಮತ್ತು ಚಿನ್ನ ವಶಕ್ಕ ಪಡೆದಿರುವ ಪೊಲೀಸರು, ಮಾಲೀಕರ ಪತ್ತೆಗಾಗಿ ತನಿಖೆ ಮುಂದುವರೆಸಿದ್ದಾರೆ.

ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಭಟ್ಕಳ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.



