ಮಂಗಳೂರು: ನಗರದ ಬಜಾಲ್ ಫೈಸಲ್ ನಗರ ನಿವಾಸಿ ರೌಡಿಶೀಟರ್ ತುಕ್ಕ ನೌಫಾಲ್ (42) ಕೊಲೆಯಾಗಿಲ್ಲ, ರೈಲು ಡಿಕ್ಕಿಯಾಗಿ ಮೃತಪಟ್ಟಿದ್ದಾರೆ ಎಂದು ಪೋಸ್ಟ್ ಮಾರ್ಟಂ ನಡೆಸಿದ ಕಾಸರಗೋಡಿನ ವೈದ್ಯರು ಮಾಹಿತಿ ನೀಡಿದ್ದಾರೆ.

ಶನಿವಾರ ಬೆಳಗ್ಗೆ ಮಂಜೇಶ್ವರ ಠಾಣೆ ವ್ಯಾಪ್ತಿಯ ಉಪ್ಪಳ ರೈಲ್ವೇ ಗೇಟ್ ಬಳಿಯಲ್ಲಿ ನೌಫಾಲ್ ಮೃತದೇಹ ಪತ್ತೆಯಾಗಿದ್ದು ಬಳಿಕ ಕಾಸರಗೋಡು ಪೆರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ಪೋಸ್ಟ್ ಮಾರ್ಟಂ ನಡೆಸಿದ ವೈದ್ಯರು ತಲವಾರಿನಿಂದ ಕಡಿದು ಆಗಿರುವ ಗಾಯಗಳಲ್ಲ. ಬದಲಿಗೆ ರೈಲು ಡಿಕ್ಕಿ ಹೊಡೆದು ಆಗಿರುವ ಗಾಯಗಳೆಂದು ಮಾಹಿತಿ ನೀಡಿದ್ದಾರೆ.

ಉಪ್ಪಳ ಗೇಟ್ ಬಳಿ ತಡರಾತ್ರಿ ಡ್ರಗ್ಸ್ ಪಡೆದಿದ್ದಾರೆಂಬ ಮಾಹಿತಿಯನ್ನು ಪೊಲೀಸರು ಕಲೆಹಾಕಿದ್ದು ಡ್ರಗ್ಸ್ ತಲುಪಿಸಿದ್ದು ಯಾರೆನ್ನುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.
ಡ್ರಗ್ಸ್ ಪಡೆದ ಬಳಿಕ ರೈಲ್ವೇ ಹಳಿಯಲ್ಲೇ ಕುಳಿತಿದ್ದರೋ ಅಥವಾ ಅಮಲಿನಲ್ಲಿದ್ದಾಗ ರೈಲು ಡಿಕ್ಕಿಯಾಗಿದೆಯೋ ಎಂಬುದು ಖಚಿತವಾಗಿಲ್ಲ. ಈ ಅಂಶಗಳನ್ನು ಆಧರಿಸಿ ಮಂಜೇಶ್ವರ ಪೊಲೀಸರು ನೌಫಾಲ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳುತ್ತಿದ್ದಾರೆ.




