ಮಂಗಳೂರು: ನಗರದ ನೆಹರೂ ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಗೌರವ ವಂದನೆಯನ್ನು ಸ್ವೀಕರಿಸಿ ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಇಂದು ನಾವು ಕರ್ನಾಟಕ ರಚನೆಯ 69ನೇ ವರ್ಷವನ್ನು ಆಚರಿಸುತ್ತಿದ್ದೇವೆ. ಏಕೀಕೃತ ಕನ್ನಡ ರಾಜ್ಯಕ್ಕಾಗಿ ಹೋರಾಡಿದ ಮಹಾನ್ ನಾಯಕರು, ಲೇಖಕರು ಮತ್ತು ದೂರದೃಷ್ಟಿಯ ವ್ಯಕ್ತಿಗಳನ್ನು ನಾವು ಸ್ಮರಿಸಬೇಕು. ನಮ್ಮದು ಸಂಸ್ಕೃತಿ, ಭಾಷೆ, ಕಲೆ ಮತ್ತು ಪರಂಪರೆಯಲ್ಲಿ ಸಮೃದ್ಧವಾಗಿರುವ ನಾಡು. ಈ ಪರಂಪರೆಯ ಭಾಗವಾಗಿರುವುದಕ್ಕೆ ನಾವು ಹೆಮ್ಮೆ ಪಡಬೇಕು . ನಮ್ಮ ಸಂಪ್ರದಾಯಗಳನ್ನು ಸಂರಕ್ಷಿಸೋಣ, ನಮ್ಮ ಸಂಸ್ಕೃತಿಯನ್ನು ರಕ್ಷಿಸೋಣ ಮತ್ತು ಸಮೃದ್ಧ, ಎಲ್ಲರನ್ನು ಒಳಗೊಳ್ಳುವ ಮತ್ತು ಸ್ವಾವಲಂಬಿ ಕರ್ನಾಟಕಕ್ಕಾಗಿ ಒಟ್ಟಾಗಿ ಕೆಲಸ ಮಾಡೋಣ ಎಂದರು .

ಈ ವೇಳೆ ಅವರು 80 ಮಂದಿ ಸಾಧಕರು ಮತ್ತು ವಿಶಿಷ್ಟ ಸಂಸ್ಥೆಗಳಿಗೆ 2025ರ ಜಿಲ್ಲಾ ಮಟ್ಟದ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟಾ, ಶಾಸಕರಾದ ವೇದವ್ಯಾಸ ಕಾಮತ್, ಎಂಎಲ್‌ಸಿಗಳಾದ ಐವನ್ ಡಿಸೋಜಾ ಮತ್ತು ಮಂಜುನಾಥ ಭಂಡಾರಿ, ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ., ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಆಲ್ವರಿಸ್, ಪದ್ಮಶ್ರೀ ಹಜಬ್ಬ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.




