ಕಾನೂನು ಉಲ್ಲಂಘಿಸುವ ಚಾಲಕರ ವಿರುದ್ಧ ಕಠಿಣ ಕ್ರಮ – ಡಿಸಿಪಿ ರವಿಶಂಕರ್

ಮಂಗಳೂರು: ನಗರದಲ್ಲಿ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಿದ್ದು ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿಪಿ ರವಿಶಂಕರ್ ಹೇಳಿದ್ದಾರೆ.

ಈ ವಿಚಾರಕ್ಕೆ ಸಂಬಂಧಪಟ್ಟಂತೆ ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ರವಿಶಂಕರ್ ಅವರು ಕಳೆದ 3 ತಿಂಗಳಿನಿಂದ ವಿಶೇಷ ಕಾರ್ಯಾಚರಣೆ ಮಾಡಲಾಗಿದ್ದು, ವಾಹನ ಮಾಲಕ, ಚಾಲಕರ ವಿರುದ್ಧ 4793 ಪ್ರಕರಣಗಳನ್ನು ದಾಖಲಿಸಿ 23,21,200 ರೂಪಾಯಿ ದಂಡವನ್ನು ವಿಧಿಸಲಾಗಿದೆ.

ಕೆಲವು ವಾಣಿಜ್ಯ ಸಂಕೀರ್ಣ ಮತ್ತು ದೊಡ್ಡ ವ್ಯಾಪಾರ ಮಳಿಗೆಗಳಿಂದ ಸಂಚಾರಕ್ಕೆ ಅಡಚಣೆಯಾಗುತ್ತಿರುವುದರಿಂದ, ಅವರುಗಳಿಗೆ ಸಭೆ ಮೂಲಕ ತಿಳುವಳಿಕೆ ನೀಡಲಾಗಿದೆ. ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಸೂಚನೆಯನ್ನು ನೀಡಿ ನೊಟೀಸ್ ನೀಡಲಾಗಿದೆ. ಅಪಘಾತವನ್ನು ತಡೆಗಟ್ಟುವ ನಿಟ್ಟಿನಲ್ಲಿ, ಹೆಚ್ಚು ಅಪಘಾತಗಳಾಗುವ ಬಳಿ ಅತೀ ವೇಗವಾಗಿ ಚಾಲನೆ ಮಾಡುವ ವಾಹನಗಳ ವಿರುದ್ಧ ಕ್ರಮ ಕೈಗೊಂಡು 562 ಪ್ರಕರಣಗಳನ್ನು ದಾಖಲಿಸಿ 5,62,000 ರೂಪಾಯಿ ದಂಡವನ್ನು ವಿಧಿಸಲಾಗಿದೆ.

ವಾಹನಗಳಲ್ಲಿ ಟಿಂಟೆಡ್ ಗ್ಲಾಸು ಉಪಯೋಗಿಸಿರುವ ವಾಹನಗಳ ವಿರುದ್ಧ 5865 ಪ್ರಕರಣಗಳನ್ನು ದಾಖಲಿಸಿ 24,85,900 ರೂಪಾಯಿ ದಂಡವನ್ನು ಹಾಕಲಾಗಿದೆ ಎಂದು ವಿವರಿಸಿದರು.

Leave a Reply

Your email address will not be published. Required fields are marked *