ಸುಹಾಸ್ ಶೆಟ್ಟಿಯ ಕೊಲೆ ಪ್ರಕರಣ: ಜನರಲ್ಲಿ ಭಯ ಮೂಡಿಸುವುದಕ್ಕಾಗಿ ಕೊಲೆ ಚಾರ್ಜ್ ಶೀಟ್ ನಲ್ಲಿ ಎನ್‌ಐಎ ಉಲ್ಲೇಖ

ಮಂಗಳೂರು: ಬಜರಂಗದಳ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧಿಸಿ ಎನ್‌ಐಎ ಅಧಿಕಾರಿಗಳು 11 ಆರೋಪಿಗಳ ವಿರುದ್ಧ ಬೆಂಗಳೂರು ಎನ್‌ಐ ಎ ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ದೇಶದ್ರೋಹ ಕಾಯ್ದೆ ಸೇರಿದಂತೆ ವಿವಿಧ ಕಾಯಿದೆಗಳಡಿ ಪ್ರಕರಣ ದಾಖಲಾಗಿದ್ದು, ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.

2025ರ ಮೇ 1ರಂದು ಸುಹಾಸ್ ತನ್ನ ಸಹಚರರ ಜೊತೆಗೆ ಇನ್ನೋವಾ ಕಾರಿನಲ್ಲಿ ಬರುತ್ತಿದ್ದಾಗ ಬಜ್ಪೆಯಲ್ಲಿ ಮುಂದಿನಿಂದ ಮತ್ತೊಂದು ವಾಹನದಿಂದ ಡಿಕ್ಕಿಯಾಗಿಸಿ ಹೊರಬಂದ ಆತನಿಗೆ ಮಾರಕಾಸ್ತ್ರಗಳಿಂದ ಕಡಿದು ನಡುರಸ್ತೆಯಲ್ಲಿ ಕೊಚ್ಚಿ ಕೊಲೆ ಮಾಡಲಾಗಿತ್ತು.ಸುಹಾಸ್ ಶೆಟ್ಟಿ ಕೊಲೆ ನಡೆಸುವುದಕ್ಕಾಗಿ ನಿಷೇಧಿತ ಪಿಎಫ್ ಐ ಸಂಘಟನೆಯ ಮಾಜಿ ಸದಸ್ಯ ಅಬ್ದುಲ್ ಸಫ್ವಾನ್ ಎಂಬಾತ ನಿಯಾಜ್, ಮುಹಮ್ಮದ್ ಮುಸಾಮಿರ್, ಮಹಮ್ಮದ್ ಮುಜಾಮಿಲ್, ಇನ್ನೊಬ್ಬ ಪಿಎಫ್‌ಐ ಸದಸ್ಯ ವಾಮಂಜೂರು ನೌಶಾದ್ ಮತ್ತು ಆದಿಲ್ ಮಹರೂಫ್ ಜೊತೆಗೂಡಿ ಹೊಂಚು ಹಾಕಿ ಜನರಲ್ಲಿ ಭಯ ಮೂಡಿಸುವುದಕ್ಕಾಗಿಯೇ ಈ ರೀತಿ ಭಯಾನಕವಾಗಿ ಕೊಲೆ ಮಾಡಲಾಗಿತ್ತು .

ಕೃತ್ಯ ನಡೆಸುವುದಕ್ಕಾಗಿ ಆದಿಲ್ ಆರೋಪಿಗಳಿಗೆ ಹಣಕಾಸು ನೆರವು ನೀಡಿದ್ದ ಎಂದು ಎನ್‌ಐಎ ಅಧಿಕಾರಿಗಳು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ. ಇದಲ್ಲದೆ, ಚಿಕ್ಕಮಗಳೂರು ಮೂಲದ ಕಲಂದರ್ ಶಾಫಿ, ರಂಜಿತ್, ನಾಗರಾಜ, ಮಹಮ್ಮದ್ ರಿಜ್ವಾನ್, ಅಜರುದ್ದೀನ್, ಅಬ್ದುಲ್ ಖಾದರ್ ಅವರನ್ನು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿ ಆರೋಪ ಹೊರಿಸಲಾಗಿದೆ.

ಇನ್ನೊಬ್ಬ ಆರೋಪಿ ಅಬ್ದುಲ್ ರಜಾಕ್ ಬಗ್ಗೆ ತನಿಖೆ ನಡೆಯುತ್ತಿದ್ದು, ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಲಾಗುವುದು ಎಂದು ಕೋರ್ಟಿಗೆ ಎನ್‌ಐಎ ತಿಳಿಸಿದೆ. ಸುಹಾಸ್ ಕೊಲೆ ಪ್ರಕರಣ ಬಿಜೆಪಿ ಮತ್ತು ಹಿಂದು ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿತ್ತು. ಪ್ರಕರಣದಲ್ಲಿ ದೇಶದ್ರೋಹಿ ಸಂಘಟನೆಗಳ ಪಾತ್ರ ಮತ್ತು ಟಾರ್ಗೆಟ್ ಮಾಡಿ ಹಿಂದು ಸಂಘಟನೆ ನಾಯಕರನ್ನು ಕೊಲ್ಲಲಾಗಿದೆ ಎಂಬ ಮಾಹಿತಿ ಆಧರಿಸಿ ಕೇಂದ್ರ ಗೃಹ ಸಚಿವಾಲಯವು ಈ ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸಿತ್ತು.

Leave a Reply

Your email address will not be published. Required fields are marked *