ಕೇರಳ: ಪ್ರವಾಸಿ ಬಸ್ ಪಲ್ಟಿಯಾದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿದ್ದು, 49 ಮಂದಿ ಗಾಯಗೊಂಡ ಘಟನೆ ಕೇರಳ ಕೊಟ್ಟಾಯಂ ಬಳಿ ಅ.27 ರಂದು ಮುಂಜಾನೆಯ ವೇಳೆ ನಡೆದಿದೆ.

ಮೃತರನ್ನು ಕಣ್ಣೂರು ಜಿಲ್ಲೆಯ ಇರಿಟ್ಟಿಯ ಪೆರವೂರ್ ಮೂಲದ ಸಿಂಧು ಎಂದು ಗುರುತಿಸಲಾಗಿದೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಎಲ್ಲ ಪ್ರಯಾಣಿಕರು ಕೇರಳದ ಕಣ್ಣೂರು ಜಿಲ್ಲೆಯವರಾಗಿದ್ದು, ಕನ್ಯಾಕುಮಾರಿ ಹಾಗೂ ತಿರುವಂತರಪುರ ಪ್ರವಾಸಕ್ಕೆ ಹೋಗಿ ಮನೆಗೆ ಮರಳುತ್ತಿದ್ದರು.

ಈ ವೇಳೆ ಕೊಟ್ಟಾಯಂ ಚಿಕ್ಕಲ್ಲಯಿಲ್ ಚರ್ಚ್ ಬಳಿ ಎ.ಸಿ ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಪಲ್ಟಿಯಾಗಿ ಮರಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ಮಾಹಿತಿ ನೀಡಿದ್ದಾರೆ.

ಗಾಯಾಳುಗಳನ್ನು ಮೋನಿಪಳ್ಳಿಯ ಖಾಸಗಿ ಆಸ್ಪತ್ರೆ ಮತ್ತು ಕೊಟ್ಟಾಯಂನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಿಂದ ಸಾವಿಗೆ ಕಾರಣವಾದ ಆರೋಪದ ಮೇಲೆ ಚಾಲಕ ವಿನೋದ್ ನನ್ನು ಪೊಲೀಸರು ಬಂಧಿಸಿದ್ದಾರೆ. ಕುರವಿಲಂಗಡು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.



