ಯಕ್ಷಗಾನ ಹಾಸ್ಯ ದಿಗ್ಗಜ ಬಂಟ್ವಾಳ ಜಯರಾಮ ಆಚಾರ್ಯ ನಿಧನ

ಬಂಟ್ವಾಳ: ಯಕ್ಷಗಾನದ ಹಾಸ್ಯದಿಗ್ಗಜ ತನ್ನ ವಿಭಿನ್ನ ಶೈಲಿಯ ಹಾಸ್ಯದ ಮುಖೇನ ಪ್ರೇಕ್ಷಕರ ಮನರಂಜಿಸುತ್ತಿದ್ದ ಬಂಟ್ವಾಳ ಜಯರಾಮ್ ಆಚಾರ್ಯ ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ (ಅ.21) ಬೆಳಗ್ಗೆ ನಿಧನ ಹೊಂದಿದ್ದಾರೆ. ಬೆಂಗಳೂರಿನಲ್ಲಿ ಯಕ್ಷಗಾನ ಕಾರ್ಯಕ್ರಮವೊಂದಕ್ಕೆ ಭಾಗವಹಿಸಲು ಆಗಮಿಸಿದ್ದರು ಇಂದು ಮುಂಜಾನೆ 4 ಗಂಟೆಗೆ ಹೃದಯ ನೋವು ಕಾಣಿಸಿಕೊಂಡಾಗ ಜತೆಗಿದ್ದ ಕಲಾವಿದರು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲವಾಗದೆ ನಿಧನ ಹೊಂದಿದ್ದಾರೆ. ಜಯರಾಮ್ ಆಚಾರ್ಯ ಇವರಿಗೆ 67 ವರ್ಷ ವಯಸ್ಸಾಗಿತ್ತು.

ಬಂಟ್ವಾಳದಲ್ಲಿ 1957, ಅಕ್ಟೋಬರ್ 12ರಂದು ಬಂಟ್ವಾಳ ಗಣಪತಿ ಆಚಾರ್ಯ ಹಾಗೂ ಭವಾನಿ ಅಮ್ಮ ಅವರ ಪುತ್ರರಾಗಿ ಜನಿಸಿದ ಜಯರಾಮ ಆಚಾರ್ಯರು, ಬಂಟ್ವಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸಿ, ಅಮ್ಟಾಡಿ, ಸೊರ್ನಾಡು ಮೇಳಗಳಲ್ಲಿ ತಿರುಗಾಟ ನಡೆಸಿ ವೇಷವನ್ನೂ ಮಾಡಿದ್ದರು. ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಸಲ್ಪಡುತ್ತಿದ್ದ `ಲಲಿತ ಕಲಾ ಕೇಂದ್ರ’ಕ್ಕೆ ಸೇರಿ ಯಕ್ಷಗಾನ ಹೆಜ್ಜೆಗಾರಿಕೆ ಕಲಿತರು. ಅದಾದ ಬಳಿಕ ಕಟೀಲು ಮೇಳದಲ್ಲಿ 4 ವರ್ಷ, ಪುತ್ತೂರು ಮೇಳ, ಕದ್ರಿ ಮೇಳ, ಕುಂಬಳೆ ಮೇಳದಲ್ಲಿ ತಿರುಗಾಟ ನಡೆಸಿದರು.ಮತ್ತೆ ಕಟೀಲು ಮೇಳ, ಎಡನೀರು ಮೇಳ, ಹೊಸನಗರ ಮೇಳ, ಬಳಿಕ ಹನುಮಗಿರಿ ಮೇಳ ಹೀಗೆ ಸುಮಾರು 50 ವರ್ಷಗಳ ಯಕ್ಷಗಾನ ತಿರುಗಾಟದಲ್ಲಿ ಹಾಸ್ಯಗಾರ ಪಾತ್ರವಲ್ಲದೆ ಇತರ ಪಾತ್ರಗಳನ್ನೂ ಅವರು ನಿರ್ವಹಿಸಿದ್ದಾರೆ.

ಸ್ಥಳೀಯ ಆಸ್ಪತ್ರೆಯಲ್ಲಿರುವ ಮೃತ ದೇಹ ಆರ್.ಕೆ ಭಟ್ಟರ ಮನೆಗೆ ಅಂತಿಮ ದರ್ಶನಕ್ಕೆ ಹೋಗಿ ಆಮೇಲೆ ಆಂಬುಲೆನ್ಸ್ ಮೂಲಕ ಊರಿಗೆ ಸಾಗಲಿದೆ ಎಂದು ಬಲ್ಲ ಮೂಲಗಳ ಮೂಲಕ ತಿಳಿದುಬಂದಿದೆ.

Leave a Reply

Your email address will not be published. Required fields are marked *