Breaking
22 Mar 2026, Sun

ಮೀನು ಹೊಟ್ಟೆಗೆ ಚುಚ್ಚಿ ಕಾರವಾರದಲ್ಲಿ ಯುವಕ ಸಾವು

ಕಾರವಾರ: ಮೀನುಗಾರಿಕೆಗೆ ತೆರಳಿದ್ದ ವೇಳೆ ಮೀನೊಂದು ಹೊಟ್ಟೆಗೆ ಚುಚ್ಚಿದ ಪರಿಣಾಮ ಯುವಕನೊಬ್ಬ ಸಾವನಪ್ಪಿದ ಘಟನೆ ಕಾರವಾರದಲ್ಲಿ ನಡೆದಿದೆ.

ಮೃತ ಮೀನುಗಾರನನ್ನು ಕಾರವಾರ ತಾಲೂಕಿನ ಮಾಜಾಳಿ ಗ್ರಾಮದ ದಾಂಡೇಭಾಗ ನಿವಾಸಿ ಅಕ್ಷಯ ಅನಿಲ ಮಾಜಾಳಿಕರ್(24) ಎಂದು ಗುರುತಿಸಲಾಗಿದೆ.

ಅಕ್ಷಯ ಅವರು ಮಂಗಳವಾರ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ವೇಳೆ ನೀರಿನಿಂದ ಸುಮಾರು 8 ರಿಂದ 10 ಇಂಚು ಉದ್ದದ ಮೀನೊಂದು ಅನಿರೀಕ್ಷಿತವಾಗಿ ದೋಣಿಯೊಳಗೆ ಹಾರಿ ಬಂದು ಹೊಟ್ಟೆಗೆ ಚುಚ್ಚಿದ್ದು, ಆತನಿಗೆ ಗಂಭೀರ ಗಾಯಗಳಾಗಿದ್ದವು. ಕೂಡಲೇ ಗಾಯಗೊಂಡ ಅವರನ್ನು ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆಸ್ಪತ್ರೆಯಲ್ಲಿ ಗಾಯದ ಭಾಗಕ್ಕೆ ಹೊಲಿಗೆ ಹಾಕಿ, ವೈದ್ಯರು ಡಿಸ್ಚಾರ್ಜ್ ಮಾಡಿದ್ದರು. ಆದರೆ, ನೋವು ಕಡಿಮೆ ಆಗದ ಕಾರಣ ಬುಧವಾರ ಅಕ್ಷಯನನ್ನು ಮರಳಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಗುರುವಾರ ಬೆಳಗಿನ ಜಾವ ಸುಮಾರು 5 ಗಂಟೆ ಸುಮಾರಿಗೆ ಅಕ್ಷಯ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾನೆ. ಮೀನಿನ ಮೂತಿಯಿಂದ ಚುಚ್ಚಿದ ಪರಿಣಾಮ ಅಕ್ಷಯನ ಕರುಳಿಗೆ ಗಂಭೀರ ಗಾಯವಾಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಯುವಕನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಮೀನುಗಾರರು ಮತ್ತು ಕುಟುಂಬ ಸದಸ್ಯರು ಕ್ರಿಮ್ಸ್ ಆಸ್ಪತ್ರೆ ಬಳಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. “ವೈದ್ಯರ ನಿರ್ಲಕ್ಷ್ಯದಿಂದಲೇ ಅಕ್ಷಯ ಸಾವನ್ನಪ್ಪಿದ್ದಾನೆ. ಕೇವಲ ಹೊಲಿಗೆ ಹಾಕಿ ಡಿಸ್ಚಾರ್ಜ್ ಮಾಡಿದ್ದರು.

ಸಿಟಿ ಸ್ಕ್ಯಾನ್ ಮಾಡಿ ಮೀನಿನ ಮುಳ್ಳು ಕರುಳಿಗೆ ತಾಗಿದೆ ಎನ್ನುವುದನ್ನು ಪತ್ತೆ ಹಚ್ಚಿದ್ದರೆ ನನ್ನ ಮಗ ಬದುಕುತ್ತಿದ್ದ”. ಎಂದು ಮೃತ ಯುವಕನ ತಂದೆ ಅನಿಲ್ ಮಾಜಾಳಿಕರ್ ಅವರು ಆರೋಪಿಸಿದ್ದಾರೆ. ಸರಿಯಾದ ಚಿಕಿತ್ಸೆ ನೀಡದಿರುವುದಕ್ಕೆ ವೈದ್ಯರ ವಿರುದ್ಧ ಕುಟುಂಬಸ್ಥರು ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *