ಉಡುಪಿ: ತಾಲೂಕಿನ 80 ಬಡಗಬೆಟ್ಟು ಗ್ರಾಮದ ರಾಜೀವನಗರ ಎಂಬಲ್ಲಿ ಮನೆಯಲ್ಲಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಮಣಿಪಾಲ ಪೋಲಿಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಸೀತಾರಾಮ ರೆಡ್ಡಿ ತೌಟರೆಡ್ಡಿ (21) ಎಂದು ಗುರುತಿಸಲಾಗಿದೆ.

ಮನೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಅಕ್ಷಯಕುಮಾರಿ ಎಸ್. ಎನ್‌ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಈತನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ತಾನು ಮೇಘಾಲಯದಿಂದ ಆನ್‌ಲೈನ್ ಆಪ್ (ರೆಡಿಟ್) ಮುಖಾಂತರ ಗಾಂಜಾ ಮಾದಕ ವಸ್ತುಗಳನ್ನು ಅಂಚೆ ಮುಖೇನ ಖರೀದಿ ಮಾಡಿ ಮಣಿಪಾಲ ಹಾಗೂ ಉಡುಪಿ ಕಡೆಗಳಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಪರಿಚಯಸ್ತರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಗಳಿಸುತ್ತಿರುವುದಾಗಿ ತಿಳಿಸಿದ್ದಾನೆ.

ಪೊಲೀಸರು ಆರೋಪಿಯಿಂದ ಖಾಲಿ ಪೇಪರ್ ನಲ್ಲಿ ಗಾಂಜಾವನ್ನು ಹಾಕಿ ಸುತ್ತಿದ ಎರಡು ಪ್ಯಾಕ್ ಗಳು ಹಾಗೂ ಖಾಲಿ ಎರಡು ಏರ್ ಜಿಪ್ ಕವರ್ ಗಳು, ಟೇಬಲ್ ಮೇಲಿನ ಗಾಂಜಾವನ್ನು ಎಳೆಯುವ ಎರಡು ಬಾಂಗ್ ಹಾಗೂ 1 ಐಫೋನ್ ಹಾಗೂ ನಗದು ರೂ. 3180ನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



