ರಾಣಿ ಅಬ್ಬಕ್ಕರವರ 500ನೇ ಜನ್ಮ ಮಹೋತ್ಸವ: ಜವನೆರ್ ಬೆದ್ರ ತಂಡದಿಂದ ಬೃಹತ್ ಪ್ರತಿಮೆ ಪ್ರತಿಷ್ಠಾಪನೆ

ಮೂಡುಬಿದಿರೆ: ರಾಣಿ ಅಬ್ಬಕ್ಕರವರ 500ನೇ ಜನ್ಮ ಮಹೋತ್ಸವದ ಅಂಗವಾಗಿ ಚೌಟರ ಅರಮನೆಯ ಮುಂಭಾಗದಲ್ಲಿ ಮೂಡುಬಿದಿರೆಯ ಯುವ ಸಂಘಟನೆ ಜವನೆರ್ ಬೆದ್ರ ತಂಡ ರಾಣಿ ಅಬ್ಬಕ್ಕರವರ ಬೃಹತ್ ಪ್ರತಿಮೆಯನ್ನು ಪ್ರತಿಷ್ಠಾಪಿಸಿದೆ.

ಜವನೆರ್ ಬೆದ್ರ ಸಂಘಟನೆಯು ‘ಸ್ವಚ್ಛ ಮೂಡುಬಿದಿರೆ’ ಪರಿಕಲ್ಪನೆಯಡಿ ನಿರಂತರವಾಗಿ ‘ಕ್ಲೀನ್ ಅಪ್ ಮೂಡುಬಿದಿರೆ’ ಅಭಿಯಾನವನ್ನು ನಡೆಸುತ್ತಾ ಬಂದಿದೆ.

ಈ ಅಭಿಯಾನದ 100ನೇ ವಾರದ ಸ್ಮರಣಾರ್ಥವಾಗಿ ಈ ಹಿಂದೆ ಚೌಟರ ಅರಮನೆಯ ಎದುರು ಕಿರು ಉದ್ಯಾನವನವನ್ನು ಸ್ಥಾಪಿಸಿ, ಅಲ್ಲಿ ಅಬ್ಬಕ್ಕರವರ ಕಿರು ಪ್ರತಿಮೆಯನ್ನು ನಿರ್ಮಿಸಿದ್ದರು. ಈಗ ರಾಣಿ ಅಬ್ಬಕ್ಕರವರ 500ನೇ ಜನ್ಮ ಮಹೋತ್ಸವದ ಸವಿನೆನಪಿಗಾಗಿ, ಅದೇ ಸ್ಥಳದಲ್ಲಿ ಕಾಸರಗೋಡು ಕುಂಬಳೆಯ ಶಿಲ್ಪಿ ವೇಣುಗೋಪಾಲ್ ಅವರು ನಿರ್ಮಿಸಿರುವ ಆರೂವರೆ ಅಡಿ ಎತ್ತರದ ಬೃಹತ್ ಪ್ರತಿಮೆಯನ್ನು ಸಂಘಟನೆ ಪ್ರತಿಷ್ಠಾಪಿಸಿದೆ.

ಅ.05ರಂದು ಚೌಟರ ಮನೆತನದ ಆಡಳಿತದಲ್ಲಿರುವ ಪುತ್ತಿಗೆ ಶ್ರೀ ಸೋಮನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ತಂಡ ನಂತರ ಅರಮನೆ ಮನೆತನದ ಕುಲದೀಪ್ ಎಂ. ಅವರ ಮಾರ್ಗದರ್ಶನದಲ್ಲಿ ಹಳೆಯ ಸಣ್ಣ ವಿಗ್ರಹವನ್ನು ತೆಗೆದು, ರಾಣಿ ಅಬ್ಬಕ್ಕ ದೇವಿಯ ನೂತನ ವಿಗ್ರಹವನ್ನು ಪೀಠದ ಮೇಲೆ ಇರಿಸಿದೆ. ಈ ಪ್ರತಿಮೆಯು ತಾಲೂಕಿನ ಎರಡನೇ ಬೃಹತ್ ಪ್ರತಿಮೆಯಾಗಿದೆ.

ಈ ಸಂದರ್ಭ ಟ್ರಸ್ಟ್‌ನ ಅಧ್ಯಕ್ಷ ಅಮರ್ ಕೋಟೆ, ಕಾರ್ಯದರ್ಶಿ ದಿನೇಶ್ ನಾಯಕ್, ಟ್ರಸ್ಟಿ ರಂಜಿತ್ ಶೆಟ್ಟಿ, ಯುವ ಸಂಘಟನೆಯ ಸಂಚಾಲಕ ನಾರಾಯಣ ಪಡುಮಲೆ, ಅಬ್ಬಕ್ಕ ಬ್ರಿಗೇಡ್ ಸಂಚಾಲಕಿ ಸಹನಾ ನಾಯಕ್, ಸಂದೀಪ್ ಕೆಲಪುತ್ತಿಗೆ, ಪ್ರತಿಷ್, ಸುಮಂತ್ ಶೆಟ್ಟಿ, ಶಮಿತ್ ರಾವ್, ಶಾಂತಾ, ರಾಧಾ, ಸುನಿತಾ ಲಕ್ಷ್ಮಿ ಭಟ್ ಸಹಿತ ಹಲವು ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *